ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ನ ಜಿಯೋ ಫ್ಲಾಟ್ಫಾರಂನಲ್ಲಿ ಗೂಗಲ್ನ ಮಾತೃಸಂಸ್ಥೆ ಆಲ್ಫಬೆಟ್ 33,838.15 ಕೋಟಿ ರೂ. ಹೂಡಿಕೆ ಮಾಡಿದೆ. ಇದಕ್ಕಾಗಿ ಅದು ಜಿಯೋ ಪ್ಲಾಟ್ಫಾರಂನ ಶೇ.7.7 ಷೇರುಗಳನ್ನು ಖರೀದಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಖೇಶ್ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಗೂಗಲ್ನ ಮಾತೃ ಸಂಸ್ಥೆ ಆಲ್ಫಬೆಟ್ನ ಸಂಸ್ಥಾಪಕರನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದ ಬೆನ್ನಲ್ಲೇ ಈ ಹೂಡಿಕೆ ಬಂದಿರುವುದು ವಿಶೇಷವಾಗಿದೆ.
ಗೂಗಲ್ನ ಈ ಹೂಡಿಕೆಯೊಂದಿಗೆ ಜಿಯೋ ಫ್ಲಾಟ್ಫಾರಂನಲ್ಲಿ ವಿವಿಧ ವಿದೇಶಿ ಹೂಡಿಕೆದಾರರಿಂದ ಒಟ್ಟಾರೆ 1,52,046.10 ಕೋಟಿ ರೂ. ಹೂಡಿಕೆ ಬಂದಂತಾಗಿದೆ. ವೆಬ್ಕಾಸ್ಟ್ ಮೂಲಕ ಬುಧವಾರ ನಡೆದ ರಿಲಯನ್ಸ್ ಇಂಡಸ್ಟ್ರೀಸ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಸ್ಥೆಯ ಸಿಎಂಡಿ ಮುಖೇಶ್ ಅಂಬಾನಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ರಿಲಯನ್ಸ್ನ ಡಿಜಿಟಲ್ ವಿಭಾಗವಾಗಿರುವ ಜಿಯೋ ಫ್ಲಾಟ್ಫಾರಂನಲ್ಲಿ ಸಂಗೀತ ಮತ್ತು ಸಿನಿಮಾ ಆ್ಯಪ್ಗಳು ಇವೆ. ಜಿಯೋ ಇನ್ಫೋಕಾಂ ಎಂಬ ಟೆಲಿಕಾಂ ಕಂಪನಿ ಇದರ ಮುಖ್ಯ ಘಟಕವಾಗಿದೆ. ಇಲ್ಲಿ ಒಟ್ಟು 387 ದಶಲಕ್ಷ ಬಳಕೆದಾರರು ನೋಂದಣಿ ಹೊಂದಿದ್ದಾರೆ ಎನ್ನಲಾಗಿದೆ.