ನವದೆಹಲಿ: ಪ್ರಸಿದ್ಧ ಪೇಮೆಂಟ್ ಆ್ಯಪ್ ಆಗಿರುವ ಗೂಗಲ್ ಪೇ ಭಾರತದಲ್ಲಿ ತಾಂತ್ರಿಕ ದೋಷವನ್ನು ಎದುರಿಸುತ್ತಿದೆ. ಇಂದು ಬೆಳಗ್ಗೆಯಿಂದ ಈ ಕುರಿತಾಗಿ ದೂರುಗಳು ಕೇಳಿ ಬರುತ್ತಿದ್ದು, ಗೂಗಲ್ ಪೇಗೆ ಅಟ್ಯಾಚ್ ಆಗಿರುವ ಅಕೌಂಟ್ಗಳನ್ನು ಆ್ಯಪ್ ಏಕಾಏಕಿ ಡಿಲೀಟ್ ಮಾಡಿದೆ ಎನ್ನಲಾಗಿದೆ.
ಭಾರತದಲ್ಲಿ ಕೊಟ್ಯಂತರ ಜನರು ಗೂಗಲ್ ಪೇ ಬಳಕೆ ಮಾಡುತ್ತಿದ್ದು ಅದರಲ್ಲಿ ಅನೇಕರಿಗೆ ಈ ಸಮಸ್ಯೆ ಉಂಟಾಗಿರುವುದು ಕಂಡುಬಂದಿದೆ. ಗೂಗಲ್ ಪೇಗೆ ಅಟ್ಯಾಚ್ ಆಗಿರುವ ಅಕೌಂಟ್ಗಳು ಆ್ಯಪ್ನಲ್ಲಿ ಕಾಣಸಿಗುತ್ತಿಲ್ಲ. ಅಕೌಂಟನ್ನು ಆ್ಯಡ್ ಮಾಡಲು ಹೋದರೆ ಎಸ್ಬಿಐ ಬಿಟ್ಟು ಬೇರಾವ ಬ್ಯಾಂಕನ್ನು ಆ್ಯಪ್ ತೋರಿಸುತ್ತಿಲ್ಲ. ಅಕೌಂಟ್ ಆ್ಯಡ್ ಮಾಡುವುದಕ್ಕೆ ವೇರಿಫಿಕೇಶನ್ ಆಗುತ್ತಿಲ್ಲ ಎನ್ನುವಂತಹ ಹಲವು ದೂರುಗಳನ್ನು ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ.
ಪೇಮೆಂಟ್ ಆ್ಯಪ್ಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಗೂಗಲ್ ಪೇ ಅನ್ನು ತಿಂಗಳೊಂದಕ್ಕೆ ಪ್ರಪಂಚದಾದ್ಯಂತ 67 ಮಿಲಿಯನ್ಗೂ ಹೆಚ್ಚು ಜನರು ಬಳಸುತ್ತಾರೆ. ಮೊದಲು ಗೂಗಲ್ ತೆಜ್ ಹೆಸರಿನಲ್ಲಿದ್ದ ಆ್ಯಪ್ನ್ನು 2018ರಲ್ಲಿ ಗೂಗಲ್ ಪೇ ಎಂದು ಮರುನಾಮಕರಣ ಮಾಡಲಾಯಿತು. (ಏಜೆನ್ಸೀಸ್)