ಬೆಂಗಳೂರು: ಅಲ್ಪಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರು ಇಂದು ಭಾರತದ ಡಿಜಿಟಲ್ ಆರ್ಥಿಕತೆ ಉತ್ತೇಜನಕ್ಕಾಗಿ 10 ಬಿಲಿಯನ್ ಡಾಲರ್ (ಸುಮಾರು 75,000 ಕೋಟಿ ರೂ.)ನಿಧಿಯನ್ನು ಘೋಷಿಸಿದ್ದಾರೆ.
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗೂಗಲ್ ಸಿಇಒ ಸುಂದರ್ ಪಿಚೈ ಅವರೊಂದಿಗೆ ಸಂವಾದ ನಡೆಸಿದ್ದರು. ಕರೊನಾ ಸಂದರ್ಭದಲ್ಲಿ ಗೂಗಲ್ನಿಂದ ನಡೆಸಿದ ಹೊಸ ಕಾರ್ಯಕ್ರಮಗಳು, ಡಾಟಾ ಸೆಕ್ಯೂರಿಟಿ, ಸೈಬರ್ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದ್ದರು. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದರು. ಅದಾದ ಕೆಲವೇ ಹೊತ್ತಲ್ಲಿ ಸುಂದರ್ ಪಿಚೈ ಈ ಘೋಷಣೆ ಮಾಡಿದ್ದಾರೆ.
ಮುಂದಿನ 5-7 ವರ್ಷಗಳಲ್ಲಿ ನಾವು ಭಾರತದ ಡಿಜಿಟಲ್ ಆರ್ಥಿಕತೆಯಲ್ಲಿ 75 ಸಾವಿರ ಕೋಟಿ ರೂ.ಹೂಡಿಕೆ ಮಾಡುತ್ತೇವೆ. ಈ ವಿಚಾರ ತಿಳಿಸಲು ತುಂಬ ಸಂತೋಷವಾಗುತ್ತಿದೆ. ಶೇರು ಹೂಡಿಕೆ, ಪಾಲುದಾರಿಕೆ, ಕಾರ್ಯಚಟುವಟಿಕೆ, ಮೂಲಸೌಕರ್ಯ ಮತ್ತು ಪರಿಸರ ವ್ಯವಸ್ಥೆಯನ್ನು ಇದು ಒಳಗೊಂಡಿದೆ. ಭಾತದ ಭವಿಷ್ಯ ಮತ್ತು ಡಿಜಿಟಲ್ ಆರ್ಥಿಕತೆಯ ಮೇಲೆ ನಂಬಿಕೆಯಿಟ್ಟು ಹಣ ಹೂಡಿಕೆ ಮಾಡುತ್ತಿದ್ದೇವೆ ಎಂದು ಸುಂದರ್ ಪಿಚೈ ತಿಳಿಸಿದ್ದಾರೆ.
ಡಿಜಿಟಲ್ ಇಂಡಿಯಾದ ಪರಿಕಲ್ಪನೆಯನ್ನು ಪ್ರಸ್ತುತ ಪಡಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ಈ ಕಲ್ಪನೆಯಿಂದಾಗಿ ಭಾರತದ ಶತಕೋಟಿ ಜನರು ಆನ್ಲೈನ್ ಬಳಕೆದಾರರು ಆಗಿದ್ದಾರೆ. ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳು, ಕೈಗೆಟಕುವ ದರದ ಡೇಟಾ ಸೌಲಭ್ಯ, ವಿಶ್ವದರ್ಜೆಯ ಟೆಲಿಕಾಂ ವ್ಯವಸ್ಥೆಗಳು ಹೊಸ ಅವಕಾಶಗಳಿಗೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)