ಚಂದ್ರಜ್ಞಾನ ಆಗಮದ ಕ್ರಿಯಾಪಾದದಲ್ಲಿ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರಗಳೆಂಬ ಪಂಚ ಆಚಾರಗಳನ್ನು ಬೋಧಿಸಿ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮಗಳಾದ 64 ಶೀಲಗಳು ಪ್ರತಿಪಾದಿಸಲ್ಪಟ್ಟಿವೆ.
ದೀಕ್ಷಾ ಸಂಸ್ಕಾರಿಯಾದವನು ಇಷ್ಟ, ಪ್ರಾಣ, ಭಾವ ಲಿಂಗಗಳನ್ನು ಪ್ರತಿನಿತ್ಯ ತಪ್ಪದೇ ಪೂಜಿಸುವದು, ಶಿವ ಲಾಂಛನಗಳಾದ ಲಿಂಗ, ಭಸ್ಮ, ರುದ್ರಾಕ್ಷಿ ಗಳನ್ನು ಎಚ್ಚರಿಕೆಯಿಂದ ಧರಿಸಿಕೊಳ್ಳುವುದು, ನಿತ್ಯ ಪೂಜೆಯಲ್ಲಿ ವ್ಯತ್ಯಯವಾದಾಗ ಅನ್ನಾದಿಗಳನ್ನು ಗ್ರಹಿಸದೇ ಇರುವುದು, ಆರಾಧ್ಯರೆ ನಿಸಿಕೊಂಡ ಗುರುಲಿಂಗ ಜಂಗಮರನ್ನು ಒಂದೇ ಎಂದು ಭಾವಿಸುವುದು,
ತಾನು ಬಳಸುವ ದ್ರವ್ಯ, ಕ್ಷೇತ್ರ, ಗೃಹ, ಭಾಂಡ, ತೃಣ, ಕಾಷ್ಠ, ವೀಟಿಕಾ, ಪಾಕ, ರಸ ಮುಂತಾದ ಸಕಲ ಪದಾರ್ಥ ಗಳನ್ನು ಶಿವಭಕ್ತರಿಂದಲೇ ಗ್ರಹಿಸುವುದು ಅಥವಾ ಪಾದೋದಕದಿಂದ ಶುದ್ದಿಗೊಳಿಸುವುದು, ಮನೆ, ಹೊಲಗಳ ಚತುಷ್ಕೋಣ ಗಳಲ್ಲಿ ಲಿಂಗಮುದ್ರೆಯನ್ನು ಸ್ಥಾಪಿಸುವುದರ ಮೂಲಕ ಶುದ್ದಿಗೊಳಿಸಿಕೊಳ್ಳುವದು,
ಕಾಮ ಕ್ರೋಧಾದಿ ಅರಿಷಡ್ವರ್ಗಗಳಿಂದ ಮನಸ್ಸನ್ನು ರಕ್ಷಿಸಿಕೊಳ್ಳುವುದು, ಪ್ರಾಣಿದಯೆ ಮುಂತಾದ ಸದ್ಗುಣಗಳನ್ನು ಬೆಳೆಸಿಕೊಳ್ಳುವುದು ಮುಂತಾದ ತ್ರಿಕರಣ ಶುದ್ಧಿಗೆ ಸಂಬಂಧಪಟ್ಟ 64 ಶೀಲ ಗಳನ್ನು ಹೇಳಲಾಗಿದೆ. ಶೀಲಾಚಾರದಿಂದ ಯಾರ ತ್ರಿಕರಣಗಳು ಪರಿಶುದ್ಧವಾಗಿರುತ್ತವೆಯೋ ಅವರು ಮಾತ್ರ ನಿರೋಗಿಯಾಗಿ ನೂರು ವರ್ಷಗಳ ಕಾಲ ಬದುಕಿ ಅಧ್ಯಾತ್ಮ ಸಾಧನೆಯನ್ನು ಮಾಡಬಹುದು.
ಆದ್ದರಿಂದ ಉತ್ತಮವಾದ ಆರೋಗ್ಯ ಮತ್ತು ಶ್ರೇಷ್ಠವಾದ ಆಧ್ಯಾತ್ಮಿಕ ಸಾಧನೆಗೆ ಶೀಲವೇ ಪರಮ ಕಾರಣವಾಗಿರುವುದರಿಂದ ಶೀಲಗಳು ಶಿವಭಕ್ತನ ಸವೋಕೃಷ್ಟ ಅಲಂಕಾರಗಳು. ಅಂತೆಯೇ ‘ವಿಭೂಷಣಂ ಶೀಲಸಮಂ ನಾ ಚಾನ್ಯತ್ ಶೀಲಂ ಪರಂ ಭೂಷಣಂ’ ಎಂಬುದಾಗಿಯೂ ಹೇಳಲಾಗಿದೆ. ಶೀಲ ಉಳ್ಳ ವ್ಯಕ್ತಿಯ ಮನಸ್ಸು ಸದಾ ಪರಿ ಶುದ್ಧವೂ ಸಾತ್ವಿಕವೂ ಆಗಿರುವುದರಿಂದ ಅದು ಅವನ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಅಂತೆಯೇ ಶೀಲವೂ ಒಂದು ದಿವ್ಯರಸಾಯನ ಎಂಬುದು ಚರಕ ಮಹರ್ಷಿಗಳ ಅಭಿಪ್ರಾಯವಾಗಿದೆ.