ನ್ಯೂಸ್

ಕೈಗಾರಿಕೆ ಪರ್ವಕ್ಕೆ ಶುಭಾರಂಭ

ರಾಜ್ಯಕ್ಕೆ ಹೂಡಿಕೆ ಹೆಚ್ಚೆಚ್ಚು ಬರಬೇಕು, ಕೈಗಾರಿಕೆ ಸ್ಥಾಪನೆಯಾಗಿ ಉದ್ಯೋಗ ಸೃಷ್ಟಿಯಾಗಬೇಕೆಂಬ ಧನಾತ್ಮಕ ಹಪಾಹಪಿ ಬಿ.ಎಸ್.ಯಡಿಯೂರಪ್ಪನವರದ್ದು. ಈ ನಿಟ್ಟಿನಲ್ಲಿ ಅವರ ಪ್ರಯತ್ನ ಫಲನೀಡಲು ಆರಂಭಿಸಿದೆ. ಹೂಡಿಕೆದಾರರು ಕರ್ನಾಟಕದತ್ತ ಮುಖಮಾಡಲಾರಂಭಿಸಿದ್ದಾರೆ. ಕರೊನಾ ಸಾಂಕ್ರಾಮಿಕದ ನಡುವೆ ಇಡೀ ದೇಶದಲ್ಲಿ ಅತಿ ಹೆಚ್ಚು ಬಂಡವಾಳ ಆಕರ್ಷಿಸಿ ಹೂಡಿಕೆಯಲ್ಲಿ ರಾಜ್ಯ ಮೊದಲ ಸ್ಥಾನ ಗಳಿಸಿದೆ. ದೇಶದಲ್ಲಿ ಹೂಡಿಕೆಯಾದ ಶೇ.41 ಅಂದರೆ 1.59 ಕೋಟಿ ಲಕ್ಷ ಕೋಟಿ ಬಂಡವಾಳ ಹೂಡಿಕೆಯ 103 ಪ್ರಸ್ತಾವನೆ ರಾಜ್ಯಕ್ಕೆ ಬಂದಿದೆ. ಜತೆಗೆ ಜಾಗತಿಕ ಹೂಡಿಕೆದಾರರು ಸಹ ರಾಜ್ಯದತ್ತ ಮುಖಮಾಡುವ ವಾತಾವರಣವನ್ನು ಸೃಷ್ಟಿಸಿರುವುದು ವಿಶೇಷ ಸಂಗತಿ.

ಹೊಸ ಕೈಗಾರಿಕೆ ನೀತಿ 2020-25ನ್ನು ಜಾರಿಗೆ ತಂದಿದ್ದು, ಪ್ರತಿ ವರ್ಷ ಶೇ.10 ಕೈಗಾರಿಕಾ ಬೆಳವಣಿಗೆ ದರ ನಿರ್ವಹಣೆ, 5 ಲಕ್ಷ ಕೋಟಿ ರೂ.ಗಳ ಹೂಡಿಕೆ ಆಕರ್ಷಣೆ ಹಾಗೂ 20 ಲಕ್ಷ ಉದ್ಯೋಗ ಸೃಜನೆಯ ಗುರಿ ಹಾಕಿಕೊಳ್ಳಲಾಗಿದೆ. ಇದೀಗ ತಾನೆ ಏರೋ ಇಂಡಿಯಾ ಮುಕ್ತಾಯ ಕಂಡಿದ್ದು 80 ವಿದೇಶಿ ಕಂಪೆನಿಗಳು ಭಾಗವಹಿಸಿದ್ದು, ವೈಮಾನಿಕ ವಲಯದಲ್ಲಿ ದೊಡ್ಡ ಮಟ್ಟದ ಬಂಡವಾಳ ಬರುವ ನಿರೀಕ್ಷೆ ಇದೆ. ಸದ್ಯಕ್ಕೆ 2,464 ಕೋಟಿ ರೂ. ಮೊತ್ತದ 34 ಏರೋಸ್ಪೇಸ್ ಉದ್ಯಮ ಒಪ್ಪಂದಗಳಿಗೆ ಕರ್ನಾಟಕದ ಸಹಿ ಹಾಕಿದೆ. ಕರ್ನಾಟಕವನ್ನು ವಿಶ್ವದರ್ಜೆಯ ಔದ್ಯಮಿಕ ಜಾಲವಾಗಿ ಅಭಿವೃದ್ಧಿ ಪಡಿಸಲು ಚೆನೈ - ಬೆಂಗಳೂರು ಕೈಗಾರಿಕಾ ಕಾರಿಡಾರ್​ನ ಭಾಗವಾಗಿ ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್ ನಿರ್ವಣಕ್ಕೆ ಕೇಂದ್ರ ಸರ್ಕಾರ 1,701.81 ಕೋಟಿ ರೂ. ಮೀಸಲಿರಿಸಿದ್ದು, ಇದರಿಂದ ಅಂದಾಜು 88,500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಕೊಪ್ಪಳ ಗೊಂಬೆ ತಯಾರಿಕೆ ಕ್ಲಸ್ಟರ್ ಚಟುವಟಿಕೆ ಆರಂಭವಾಗಿದೆ ಮತ್ತು ಬಳ್ಳಾರಿ ಜವಳಿ ಕ್ಲಸ್ಟರ್​ಗಳಲ್ಲಿ ಬಂಡವಾಳ ಹೂಡಲು 17 ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿದ್ದು, 5 ಕಂಪನಿಗಳು ಸರ್ಕಾರದೊಂದಿಗೆ ಒಡಂಬಡಿಕೆಗೆ ಸಹಿ ಮಾಡಿವೆ.

ಕೋವಿಡ್ ನಂತರ ಕೈಗಾರಿಕಾ ಕಾರ್ಯಾಚರಣೆ ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ. ಪೂರಕವಾಗಿ ಕೈಗಾರಿಕೆ ಮೂಲ ಸೌಕರ್ಯ ತಿದ್ದುಪಡಿ, ಭೂ ಸುಧಾರಣೆ ಕಾಯಿದೆ ತಿದ್ದುಪಡಿ, ಉದ್ಯಮ ಪ್ರಸ್ತಾಪಗಳ ತ್ವರಿತ ಅನುಮೋದನೆ ಇತ್ಯಾದಿ ಕ್ರಮಗಳಿಂದ ರಾಜ್ಯದಲ್ಲಿ ಈಗ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಯಾಗಿದ್ದು, ಹೂಡಿಕೆಯ ಪ್ರಸ್ತಾಪಗಳು ವೃದ್ಧಿಸಿವೆ.

ಉತ್ತರ ಕರ್ನಾಟಕ ಭಾಗದ ವ್ಯಾಪಾರ ವಾತಾವರಣ ಮತ್ತು ಹೂಡಿಕೆ ಅವಕಾಶಗಳನ್ನು ಸುಧಾರಿಸಲು ಮತ್ತು ಪರಿಸರ, ಮೂಲ ಸೌಕರ್ಯ ಅಭಿವೃದ್ಧಿಯನ್ನು ಶಕ್ತಗೊಳಿಸುವ ನಿಟ್ಟಿನಲ್ಲಿ ಇನ್​ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸುಮಾರು 73,714.31 ಕೋಟಿ ಬಂಡವಾಳ ಹೂಡಿಕೆಯ 54 ವಿವಿಧ ವಲಯಗಳ ಯೋಜನೆಗಳು ಕಾರ್ಯಕ್ರಮದಲ್ಲಿ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡವು. ಈ ಒಡಂಬಡಿಕೆ ಮಾಡಿಕೊಂಡ ಯೋಜನೆಗಳಿಂದ ಸುಮಾರು 90,507 ಉದ್ಯೋಗಾವಕಾಶಗಳು ಸೃಜನೆಯಾಗಲಿವೆ.

ಸುಲಲಿತ ವ್ಯವಹಾರಕ್ಕೆ ಸೂತ್ರ

ಹೊಸ ಕೈಗಾರಿಕೆ ನೀತಿ ರಾಜ್ಯದಲ್ಲಿ ಸುಲಲಿತ ವ್ಯವಹಾರ (ಈಸ್ ಆಫ್ ಡೂಯಿಂಗ್) ಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಈ ನಿಟ್ಟಿನಲ್ಲಿ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ (ಎಬಿಸಿ) ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಸ್ವಯಂ ಘೊಷಣೆ ಪತ್ರ ಮುಖೇನ ಕೈಗಾರಿಕೆಗಳ ಸ್ಥಾಪನೆ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ಯೋಜನೆ ಇದಾಗಿದ್ದು, ವಿವಿಧ ಇಲಾಖೆಗಳ ಆಯ್ದ 15 ಉದ್ಯಮ ಸೇವೆಗಳು ಇದರ ವ್ಯಾಪ್ತಿಗೆ ಬರಲಿವೆ.

ಏನೇನು ನಿರೀಕ್ಷಿಸಬಹುದು?

1. ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳನ್ನು ಟಯರ್-2 ಹಾಗೂ ಟಯರ್-3 ನಗರಗಳಲ್ಲಿ ವಿಸ್ತರಿಸುವುದು ಪ್ರಮುಖ ಉದ್ದೇಶ. ಹಿಂದುಳಿದಿರುವ ಕೈಗಾರಿಕಾ ಅಭಿವೃದ್ಧಿಯನುಸಾರ ಬಂಡವಾಳ ಹೂಡಿಕೆಗಳಿಗೆ ರಿಯಾಯಿತಿ ಒದಗಿಸಲು ರಾಜ್ಯದ ಜಿಲ್ಲೆಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದೆ.

2. ಜೋನ್-1 ಹಾಗೂ 2ರಡಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳು ಸೇರಿರುತ್ತವೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ಜೋನ್-3 ರಲ್ಲಿ ವರ್ಗೀಕರಿಸಲಾಗಿದೆ. ರಾಜ್ಯಾದ್ಯಂತ 5-6 ಕೈಗಾರಿಕಾ ಟೌನ್​ಶಿಪ್ ಅಭಿವೃದ್ಧಿಪಡಿಸಲಾಗುತ್ತದೆ.

3. ವಾಹನ ಮತ್ತು ವಾಹನಗಳ ಬಿಡಿಭಾಗಗಳು, ಔಷಧಿ ಮತ್ತು ಲಾಜಿಸ್ಟಿಕ್ಸ್, ನವೀಕರಿಸಬಹುದಾದ ಇಂಧನ, ಏರೋಸ್ಪೇಸ್ ಮತ್ತು ರಕ್ಷಣೆ ಹಾಗೂ ವಿದ್ಯುತ್​ಚಾಲಿತ ವಾಹನಗಳು ಮೊದಲಾದ ವೈದ್ಯಕೀಯ ಉಪಕರಣಗಳು, ಎಂಜಿನಿಯರಿಂಗ್ ಮತ್ತು ಯಂತ್ರೋಪಕರಣ ಬಿಡಿಭಾಗಗಳು, ಜ್ಞಾನ ಆಧಾರಿತ ಕೈಗಾರಿಕೆಗಳು, ಪ್ರಮುಖ ವಲಯಗಳ ಮೇಲೆ ನೀತಿಯು ಗಮನ ಕೇಂದ್ರೀಕರಿಸಿದೆ.

4. ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಸಾಧ್ಯವಾಗುವಂತೆ ಏಕೀಕೃತ ತಂತ್ರಜ್ಞಾನ ವೇದಿಕೆ ’ಸಮರ್ಥ’ ಎಂಬ ಉಪಕ್ರಮವನ್ನು ಪರಿಚಯಿಸಲಾಗುತ್ತಿದೆ.

5. ಸೆಲ್ಪ್ ಫೈನಾನ್ಸಿಂಗ್ ಸಂಸ್ಥೆಗಳು ಸಹ ಸಮಗ್ರ ಬ್ಲಾ್ಯಕೆಂಟ್ ಇನ್ವೆಸ್ಟ್​ಮೆಂಟ್ ಪೊ›ಮೋಷನ್ ಸಬ್ಸಿಡಿಗೆ ಅರ್ಹವಾಗುವುದು. 4.0 ಉದ್ದಿಮೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಉತ್ಪಾದನಾ ನವೀಕರಣ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ತಂತ್ರಜ್ಞಾನ ನಾವೀನ್ಯತೆಯನ್ನು ಆದ್ಯತೆಯ ಕ್ಷೇತ್ರಗಳಾಗಿ ಗುರುತಿಸಲಾಗಿದೆ.

ಭೂ ಖರೀದಿ ಅತಿ ಸರಳ

ಕೈಗಾರಿಕೋದ್ಯಮಿಗಳಿಗೆ ಭೂಮಿ ಖರೀದಿಯೇ ದೊಡ್ಡ ಸವಾಲಿನ ವಿಚಾರ. ಆದರೆ, ಇದೀಗ ಸರ್ಕಾರ ಕರ್ನಾಟಕವನ್ನು ಹೂಡಿಕೆದಾರರ ನೆಚ್ಚಿನ ತಾಣವಾಗಿ ರೂಪಿಸಲು ಭೂ ಖರೀದಿಯನ್ನು ಸರಳಗೊಳಿಸಿದೆ. ಭೂ ಸುಧಾರಣಾ ಕಾಯ್ದೆ 1961ರ ಸೆಕ್ಷನ್ 109 ಹಾಗೂ 79 ಎ ಮತ್ತು ಬಿಗೆ ತಿದ್ದುಪಡಿ ತಂದು, ಸಂಭಾವ್ಯ ಹೂಡಿಕೆದಾರರಿಗೆ ಎಲ್ಲ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ವ್ಯವಸ್ಥಿತ ಕಾರ್ಯವಿಧಾನಗಳನ್ನು ಜಾರಿಗೆ ತರಲಾಗಿದೆ. ಕೃಷಿ ಉದ್ದೇಶಕ್ಕೆ ಭೂಮಿ ಹೊಂದಿರುವ ಮಾಲೀಕರು ಆ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತಿಸಲು ಇಚ್ಛಿಸಿದರೆ, ಆನ್​ಲೈನ್ ಮೂಲಕ ಆ ವಿಧಾನವನ್ನು ಸರಳೀಕರಿಸಲಾಗಿದೆ. ರಾಜ್ಯದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಮತ್ತು ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ ಒಪ್ಪಿಗೆ ಪಡೆದ ಬಳಿಕೆ 30 ದಿನದೊಳಗೆ ಅನುಮತಿ ದೊರೆಯುತ್ತದೆ. ಇಲ್ಲದಿದ್ದರೆ ಅದನ್ನು ಡೀಮ್್ಡ ಪರಿವರ್ತನೆ ಎಂದು ಪರಿಗಣಿಸಲಾಗುತ್ತದೆ.

ಹೂಡಿಕೆದಾರರಿಗೆ ರೆಡ್ ಕಾರ್ಪೆಟ್

ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿ 2020-2025ನ್ನು ಹೊರತಂದಿದೆ. ಈ ನೀತಿಯಲ್ಲಿ ಉತ್ತೇಜನಾ ಕ್ರಮ ಹಾಗೂ ರಿಯಾಯಿತಿ ಪ್ಯಾಕೇಜ್ 2020ರ ಆಗಸ್ಟ್ 13ರಿಂದಲೇ ಅನ್ವಯವಾಗಿದ್ದು, ಮುಂದಿನ 5 ವರ್ಷಗಳ ಅವಧಿಗೆ ಅಥವಾ ಮುಂದಿನ ನೀತಿ ಘೊಷಣೆ ಆಗುವವರೆಗೆ ಜಾರಿಯಲ್ಲಿರುತ್ತದೆ.