- ಒಟಿಟಿ ಪ್ರಿಯರಿಂದ ಭಾರೀ ಮನ್ನಣೆ ಮತ್ತು ಜನಪ್ರಿಯತೆ
- ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್
- ಆಶ್ಚರ್ಯ ಮೂಡಿಸುವಂತಿದೆ ಕಲಾವಿದರ ಸಂಭಾವನೆ ಮೊತ್ತ
ಮುಂಬೈ: ಒಟಿಟಿ ಪ್ಲಾಟ್ಫಾರ್ಮ್ನಲ್ಲಿ 'ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ಮಾಡಿರುವ ಹಾಗೂ ಮಾಡುತ್ತಿರುವ ಸದ್ದು, ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಚಿತ್ರಗಳು ಮಾಡದಿರುವುದು ಆಶ್ಚರ್ಯವೇ ಸರಿ. ಒಟಿಟಿ ಪ್ರಿಯರಿಂದ ಭಾರೀ ಮನ್ನಣೆ ಮತ್ತು ಜನಪ್ರಿಯತೆಯನ್ನು ಪಡೆದುಕೊಂಡಿರುವ 'ಫ್ಯಾಮಿಲಿ ಮ್ಯಾನ್' ಸಿರೀಸ್, ಇದೀಗ ಮೂರನೇ ಭಾಗದ ಮೂಲಕ ಮತ್ತೊಮ್ಮೆ ಚಿತ್ರರಸಿಕರ ಮುಂದೆ ಹಾಜರಾಗಿದೆ.
ಒಟಿಟಿಯಲ್ಲಿ ಸಖತ್ ರೆಸ್ಪಾನ್ಸ್
ರಾಜ್-ಡಿಕೆ ನಿರ್ದೇಶನದ ಈ ಸರಣಿಯ ಮೊದಲ ಭಾಗವು 2019ರಲ್ಲಿ ಬಿಡುಗಡೆಯಾಯಿತು ಮತ್ತು ಸೂಪರ್ಹಿಟ್ ಕೂಡ ಆಯಿತು. ಇದು ಭಾರತೀಯ ವೆಬ್ ಸರಣಿಯ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಸರಣಿಯಾಗಿದೆ. 2021ರಲ್ಲಿ ಎರಡನೇ ಸರಣಿ ಬಂದಾಗ, ನಿರೀಕ್ಷೆಗೆ ತಕ್ಕಂತೆ ಇದು ಸಹ ಯಶಸ್ವಿಯಾಯಿತು. ಈಗ ಮೂರನೇ ಸೀಸನ್ ಲೈವ್ ಸ್ಟ್ರೀಮಿಂಗ್ ಆಗುತ್ತಿದ್ದು, ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಮುಂಚೂಣಿಯಲ್ಲಿದೆ.
ಪ್ರಸ್ತುತ, ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಈ ಸರಣಿಯು ತನ್ನ ಕಥಾಹಂದರದಿಂದ ನೋಡುಗರಲ್ಲಿ ಕೌತುಕ ಹೆಚ್ಚಿಸಿದೆ. ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ದಾಖಲೆ ಬರೆಯಲು ಸಜ್ಜಾಗಿರುವ ಈ ಸರಣಿಯ ರಿಲೀಸ್ ನಂತರ, ಸಿರೀಸ್ನ ಪ್ರಮುಖ ಪಾತ್ರಗಳಲ್ಲಿ ಮಿಂಚಿರುವ ನಟರಾದ ಮನೋಜ್ ಬಾಜ್ಪೇಯಿ, ಪ್ರಿಯಾಮಣಿ ಸೇರಿ ಮುಂತಾದವರ ಸಂಭಾವನೆ ವಿಚಾರ ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಹೀಗಿದೆ ಸಂಭಾವನೆ ಲೆಕ್ಕ!
ಅಷ್ಟಕ್ಕೂ ಯಾರು ಎಷ್ಟು ಸಂಭಾವನೆ ಪಡೆದಿದ್ದಾರೆ? ಯಾರಿಗೆ ಚಿತ್ರತಂಡ ಎಷ್ಟು ನೀಡಿದೆ ಎಂಬುದರ ಕುರಿತು ಒಂದಷ್ಟು ವದಂತಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಾಲಿವುಡ್ ಮೂಲಗಳ ಪ್ರಕಾರ, ಪ್ರತ್ಯೇಕವಾಗಿ, ಮೂರನೇ ಸರಣಿಗೆ ಶ್ರೀಕಾಂತ್ ತಿವಾರಿ ಪಾತ್ರವನ್ನು ನಿರ್ವಹಿಸಿದ ಮನೋಜ್ ಬಾಜ್ಪೇಯಿ ಅವರು 20ರಿಂದ 22 ಕೋಟಿ ರೂ. ಪೇಮೆಂಟ್ ಪಡೆದಿದ್ದಾರೆ ಎನ್ನಲಾಗಿದೆ.
ಈ ಸರಣಿಯಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿರುವ ಜೈದೀಪ್ ಅಹ್ಲಾವತ್ 9 ಕೋಟಿ ರೂ. ಪಡೆದಿದ್ದಾರೆ. ಇನ್ನು ಮನೋಜ್ ಬಾಜ್‌ಪೇಯಿ ಅವರ ಸಂಗಾತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾಮಣಿ ಅವರು 7 ಕೋಟಿ ರೂ., ಮೀರಾ ಪಾತ್ರಧಾರಿ ನಿಮ್ರತ್ ಕೌರ್ 8ರಿಂದ 9 ಕೋಟಿ ರೂ., ದರ್ಶನ್ ಕುಮಾರ್ ಸುಮಾರು 8 ಕೋಟಿ ರೂ. ಹಣವನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ,(ಏಜೆನ್ಸೀಸ್).