ಬೆಂಗಳೂರು: ಶಾಲೆ ದತ್ತು ಸ್ವೀಕಾರಕ್ಕೆ ಜನಪ್ರತಿನಿಧಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ರಾಜ್ಯದ 190 ಶಾಸಕರು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ ತಿಳಿಸಿದರು.
ಪ್ರಮುಖ ಶಿಫಾರಸುಗಳು - ಮುಂದಿನ ವರ್ಷದಿಂದ ವಿಧಾನಪರಿಷತ್ ಸದಸ್ಯರು, ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಸರ್ಕಾರಿ ಶಾಲೆ ದತ್ತು ಪಡೆಯಬೇಕು. - ಶಿಕ್ಷಣ ಸಂಸ್ಥೆಗಳಲ್ಲಿ ಮಾರ್ಗದರ್ಶಿ ಶಿಕ್ಷಕರ ಮೇಲ್ವಿಚಾರಣಾ ವ್ಯವಸ್ಥೆ ಕಲ್ಪಿಸಬೇಕು. - ಅಂಗವಿಕಲರ ಸಬಲೀಕರಣಕ್ಕೆ ವಿಶೇಷ ಕ್ರಮ ತೆಗೆದುಕೊಳ್ಳಬೇಕು. - ಮೂಲಸೌಕರ್ಯ ಚೆನ್ನಾಗಿರುವ ಕಾಲೇಜುಗಳ ಕ್ಲಸ್ಟರ್ ಪರಿಕಲ್ಪನೆಯಡಿ ಕಾಲೇಜುಗಳನ್ನು ದತ್ತು ಪಡೆಯಬೇಕು.
ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಯಡಿಯೂರಪ್ಪ ತಮ್ಮ ವಿಧಾನಸಭಾ ಕ್ಷೇತ್ರದ 10 ಶಾಲೆ, ಡಿಸಿಎಂಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ 8 ಶಾಲೆ, ಗೋವಿಂದ ಕಾರಜೋಳ ಹಾಗೂ ಲಕ್ಷಣ ಸವದಿ ತಲಾ 5 ಶಾಲೆ ದತ್ತು ಪಡೆದಿದ್ದಾರೆ. ಒಟ್ಟಾರೆಯಾಗಿ 190 ಶಾಸಕರು ಈವರೆಗೆ 603 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ದೆಹಲಿಗೆ ತೆರಳಿ ಅಲ್ಲಿನ ಶಿಕ್ಷಣ ವ್ಯವಸ್ಥೆ ಅಧ್ಯಯನ ಮಾಡಲು ನಿರ್ಧರಿಸಿದ್ದೇನೆ. ಅದೇ ರೀತಿ ಉತ್ತರಪ್ರದೇಶ ಸರ್ಕಾರ ತೆಗೆದುಕೊಂಡಿರುವ ಒಳ್ಳೆಯ ಕ್ರಮಗಳ ಬಗ್ಗೆಯೂ ಅಧ್ಯಯನ ನಡೆಸಲಿದ್ದೇವೆ. | ಎಂ.ಆರ್.ದೊರೆಸ್ವಾಮಿ, ಶಿಕ್ಷಣ ಸುಧಾರಣೆ ಸಲಹೆಗಾರ
ಚಿತ್ರನಟ ಸುದೀಪ್ 8 ಶಾಲೆ, ತುಮಕೂರು ಹಾಗೂ ಬೆಂಗಳೂರು ಉತ್ತರ ವಿವಿಯಿಂದ ತಲಾ 10 ಶಾಲೆ, ಮೈಸೂರು ವಿವಿಯಿಂದ 8 ಶಾಲೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ 10 ಶಾಲೆ, ಪಿಇಎಸ್, ರೇವಾ, ಪ್ರೆಸಿಡೆನ್ಸಿ, ಸಿಎಂಆರ್, ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯ, ಕೆಎಲ್ಇ ಖಾಸಗಿ ವಿಶ್ವವಿದ್ಯಾಲಯಗಳು ತಲಾ 10 ಹಾಗೂ ನಿಟ್ಟೆ ವಿಶ್ವವಿದ್ಯಾಲಯ 8, ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ 4 ಹಾಗೂ ಇಂಡಿಯನ್ ಅಕಾಡೆಮಿಕ್ ಕಾಲೇಜು 11 ಶಾಲೆಗಳನ್ನು ದತ್ತು ಪಡೆದಿವೆ. ಅಲ್ಲದೆ, ಮಾಧ್ಯಮ ಸಂಸ್ಥೆಗಳು ಕೂಡ ಶಾಲೆಯನ್ನು ದತ್ತು ಪಡೆದಿವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಉಪ್ಪಿನಕಾಯಿ ಜಾರೂ ಹೋಯ್ತು, 81,000 ರೂಪಾಯಿನೂ ಹೋಯ್ತು!
ಮುಂದಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಸಿಎಸ್ಆರ್ ನಿಧಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವಂತಾಗಬೇಕೆಂದು ಎಲ್ಲ ಕಂಪನಿಗಳ ಜತೆ ಮಾತುಕತೆ ನಡೆಸಲು ಆಲೋಚಿಸಿದ್ದೇವೆ. ಈಗಾಗಲೇ ಇನ್ಪೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರೊಂದಿಗೂ ಮಾತನಾಡಿದ್ದೇವೆ ಎಂದರು.
ಶಾಸಕರು ಅಥವಾ ದಾನಿಗಳು ದತ್ತು ಪಡೆದ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಂಪೌಂಡ್ ವಾಲ್, ಹೆಚ್ಚುವರಿ ತರಗತಿ ಕೊಠಡಿ, ಕನಿಷ್ಠ 10 ಕಂಪ್ಯೂಟರ್ ಸಹಿತ ಕಂಪ್ಯೂಟರ್ ಲ್ಯಾಬ್, ಕ್ರೀಡಾಸೌಲಭ್ಯ, ಗ್ರಂಥಾಲಯ ಇತ್ಯಾದಿಗಳನ್ನು ಒದಗಿಸಬೇಕು. ಸಂಪೂರ್ಣವಾಗಿ ಶಾಲಾ ಕಟ್ಟಡ ನಿರ್ವಿುಸಿದರೆ, ದಾನಿಗಳ ಹೆಸರನ್ನೇ ಆ ಕಟ್ಟಡಕ್ಕೆ ನಾಮಕರಣ ಮಾಡಲಾಗುವುದು ಎಂದರು.