ನ್ಯೂಸ್

ಉತ್ತಮ ಯೋಜನೆ; ಪರಿಣಾಮಕಾರಿ ಅನುಷ್ಠಾನ ಅಗತ್ಯ..

Webdesk - Ravikanth

ಕೃಷಿರಂಗದ ಸಮಸ್ಯೆಗಳಿಗೆ ಹಲವು ಆಯಾಮ. ಹಾಗೆಯೇ, ರೈತರ ಬದುಕಿನಲ್ಲೂ ನೂರೆಂಟು ಸಮಸ್ಯೆ. ಹಲವು ಸರ್ಕಾರಗಳು ಸುಧಾರಣೆಗೆ ಯತ್ನಿಸಿರುವುದು ಹೌದಾದರೂ, ಸಿಕ್ಕ ಫಲಿತಾಂಶ ಮಾತ್ರ ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ನೈಜವಾದ ಸಮಸ್ಯೆಯನ್ನು ಅರ್ಥೈಸಿಕೊಳ್ಳುವುದು ಮತ್ತು ಆ ನಿಟ್ಟಿನಲ್ಲಿ ನಿಖರ ಪರಿಹಾರವನ್ನು ಶೋಧಿಸುವ ಇಚ್ಛಾಶಕ್ತಿ ತೋರಿದರೆ ಪರಿಸ್ಥಿತಿ ಬದಲಾಗುವುದರಲ್ಲಿ ಅನುಮಾನವಿಲ್ಲ. ಭಾನುವಾರ ಚಾಲನೆ ಪಡೆದ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಯೋಜನೆ ಉತ್ತಮ ಆಶಯ ಹೊಂದಿರುವಂಥದ್ದು. ಕರ್ನಾಟಕದ ಈ ಮಾದರಿಯನ್ನು ಇತರ ರಾಜ್ಯಗಳು ಅನುಸರಿಸುವಂತೆ ಮುಖ್ಯಮಂತ್ರಿಗಳ ಸಭೆಯಲ್ಲಿ ಸಲಹೆ ನೀಡುವುದಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಾರ್ಷಿಕ 2,500ರಿಂದ 11,000 ರೂ.ವರೆಗೆ ಶಿಷ್ಯವೇತನ ನೀಡುವ ಈ ಯೋಜನೆಯಡಿ 17 ಲಕ್ಷ ರೈತರ ಮಕ್ಕಳಿಗೆ ಒಟ್ಟು 1,000 ಕೋಟಿ ರೂ. ಪಾವತಿಸಲಾಗಿದೆ. ‘ಇದು ವೆಚ್ಚವಲ್ಲ ಬಂಡವಾಳ ಹೂಡಿಕೆಯಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿರುವುದು ಗಮನಾರ್ಹ. ರೈತರ ಮಕ್ಕಳ ಶೈಕ್ಷಣಿಕ ಸ್ತರ ವಿಸ್ತಾರಕ್ಕೆ ಮತ್ತು ಉನ್ನತ ಶಿಕ್ಷಣದ ಕನಸು ನನಸಾಗುವ ನಿಟ್ಟಿನಲ್ಲಿ ‘ ರೈತ ವಿದ್ಯಾನಿಧಿ’ ಯಶಸ್ವಿಯಾದರೆ, ಸುಧಾರಣೆ ನಿಟ್ಟಿನಲ್ಲಿ, ಅದೊಂದು ಮಹತ್ವದ ಮೈಲಿಗಲ್ಲೇ ಸರಿ. ಮದುವೆ, ಆರೋಗ್ಯ ವಿಚಾರದಲ್ಲಿ ಅನ್ನದಾತರ ಕುಟುಂಬಕ್ಕೆ ಆಸರೆಯಾಗುವ ಯೋಜನೆ ರೂಪಿಸುವ ಚಿಂತನೆಯಿದೆ ಎಂದೂ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇಂಥ ಮಹತ್ವದ ಯೋಜನೆಗಳು ಆರಂಭಿಕ ಹಂತದಲ್ಲಿ ಮಾತ್ರವಲ್ಲ, ನಂತರದ ದಿನಗಳಲ್ಲೂ ಸರಿಯಾಗಿ ಅನುಷ್ಠಾನಕ್ಕೆ ಬರಬೇಕು. ವಿಳಂಬ ನೀತಿ ಅಥವಾ ಅವ್ಯವಹಾರಕ್ಕೆ ಆಸ್ಪದ ನೀಡದೆ ಪಾರದರ್ಶಕವಾಗಿ ನಿಜವಾದ ಫಲಾನುಭವಿಗಳಿಗೆ ತಲುಪಬೇಕು. ಅಂಥ ಕಾಳಜಿ ಮತ್ತು ಬದ್ಧತೆಯನ್ನು ಸರ್ಕಾರ ತೋರುವಂತಾಗಲಿ.

ರಾಜ್ಯದಲ್ಲಿ ಇಂದಿನಿಂದ (ಸೋಮವಾರ) 6-8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗುತ್ತಿದೆ. ಈ ನಿಟ್ಟಿನಲ್ಲಿ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ, ಮುಂದಿನ ಕಲಿಕೆಯ ಉದ್ದೇಶದಿಂದ ಶಾಲೆ ಆರಂಭದ ನಿರ್ಧಾರ ಅನಿವಾರ್ಯವಾಗಿತ್ತು. ಭೌತಿಕ ತರಗತಿಗಳು ಇಲ್ಲದ್ದರಿಂದ ಈಗಾಗಲೇ ಹಲವು ಅಡ್ಡಪರಿಣಾಮಗಳು ಗೋಚರಿಸಿದ್ದು, ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಅಪಾಯಕ್ಕೆ ಆಹ್ವಾನ ನೀಡದಂತೆ, ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಶಾಲೆಗಳನ್ನು ಆರಂಭಿಸಬೇಕು. ಆ ಬಳಿಕವೂ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಕರೊನಾ ಸೋಂಕಿನ ಮೊದಲ ಮತ್ತು ಎರಡನೇ ಅಲೆಯಲ್ಲಿ 1 ರಿಂದ 19 ವರ್ಷದೊಳಗಿನ 3.30 ಲಕ್ಷ ಮಕ್ಕಳಿಗೆ ಸೋಂಕು ತಗುಲಿದೆ ಎಂಬ ವರದಿಯಿದೆ. ಅಲ್ಲದೆ, ಕೆಲವು ಕಡೆ ಮೂರನೇ ಅಲೆಯ ಲಕ್ಷಣಗಳೂ ಗೋಚರಿಸುತ್ತಿವೆ. ಎರಡನೇ ಅಲೆ ಗ್ರಾಮೀಣ ಪ್ರದೇಶಕ್ಕೂ ಕಾಲಿರಿಸಿತ್ತು. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಮಕ್ಕಳ, ಶಿಕ್ಷಕರ ಆರೋಗ್ಯದ ಹಿತವನ್ನು ನಿರ್ಲಕ್ಷಿಸದೆ ಭೌತಿಕ ತರಗತಿಗಳು ನಿರ್ವಿಘ್ನವಾಗಿ ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಪಾಲಕರ ಸಹಕಾರವೂ ಅಗತ್ಯ ಎಂಬುದನ್ನು ಮರೆಯುವಂತಿಲ್ಲ.