Casefire: ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ 12 ದಿನಗಳ ಸಂಘರ್ಷ ಕೊನೆಗೊಳ್ಳುವ ಸನಿಹದಲ್ಲಿದೆ. ಇದರ ಪರಿಣಾಮ ತೈಲ ಬೆಲೆಗಳು ಕುಸಿದಿವೆ. ಈ ಹಿನ್ನೆಲೆ ಏಷ್ಯಾದ ಷೇರು ಮಾರುಕಟ್ಟೆಗಳು ತಮ್ಮ ವೈಭವಕ್ಕೆ ಮರಳುತ್ತಿದ್ದು, ಇದರ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯ ಮೇಲೂ ಕಂಡುಬರುತ್ತದೆ ಎಂದು ವರದಿಯಾಗಿದೆ.
ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮವನ್ನು ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದಾಗಲೇ ಘೋಷಿಸಿದ್ದಾರೆ. ಟ್ರಂಪ್ ಅವರ ಈ ಘೋಷಣೆಯ ಬಳಿಕ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಕಡಿಮೆಯಾಗುವ ಸಾಧ್ಯತೆಯ ದೃಷ್ಟಿಯಿಂದ ಕಚ್ಚಾ ತೈಲ ಬೆಲೆಗಳು ಶೇ.6 ರಷ್ಟು ಭಾರಿ ಕುಸಿದಿವೆ. ಇದರಿಂದಾಗಿ ಕಚ್ಚಾ ತೈಲದ ಬೆಲೆ $ 70 ಕ್ಕಿಂತ ಕಡಿಮೆಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಜೂ.23 ರ ತಡರಾತ್ರಿ, ಇರಾನ್ ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿಗಳಿಂದ ದಾಳಿ ಮಾಡಿದೆ ಎಂದು ವರದಿಯಾಗಿತ್ತು. ಇದರಿಂದಾಗಿ ಮಂಗಳವಾರ ಬೆಳಿಗ್ಗೆ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗುತ್ತದೆ ಮತ್ತು ಕಚ್ಚಾ ತೈಲದ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಟ್ರಂಪ್ ಅವರ ಕದನ ವಿರಾಮ ಘೋಷಣೆಯು ಮಾರುಕಟ್ಟೆ ಮತ್ತು ಕಚ್ಚಾ ತೈಲ ಮಾರುಕಟ್ಟೆಯ ಸ್ಥಿತಿಯನ್ನು ಬದಲಾಯಿಸಿದೆ.
ಸಂಪೂರ್ಣ ಕದನ ವಿರಾಮ ಜಾರಿಯಾದರೆ ಕಚ್ಚಾ ತೈಲ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸರಿಸುಮಾರು ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 65 ಅಮೆರಿಕನ್ ಡಾಲರ್ ಆಗಲಿದೆ ಎಂದಿದ್ದಾರೆ. ಇರಾನ್ ಇಸ್ರೇಲ್ ಯುದ್ಧ, ಹೊರ್ಮುಜ್ ಜಲಸಂಧಿ ಮುಚ್ಚವ ನಿರ್ಧಾರಗಳಿಂದ ಈ ಬೆಲೆ 75 ಅಮರಿಕನ್ ಡಾಲರ್‌ಗೆ ಏರಿಕೆಯಾಗಿತ್ತು.
ಇದನ್ನೂ ಓದಿ:ವಿಶ್ವದ ಮೊದಲ ವಿದ್ಯುತ್ ಚಾಲಿತ ಪ್ರಯಾಣಿಕರ ವಿಮಾನ ಹಾರಾಟ: ಕೇವಲ 700 ರೂ.ಗೆ 130 ಕಿ.ಮೀ ಪ್ರಯಾಣ! Electric plane
ಅಮೆರಿಕದ ದಾಳಿಯ ನಂತರ, ಇರಾನ್ ವಿಶ್ವದ ಪ್ರಮುಖ ಕಚ್ಚಾ ತೈಲ ಪೂರೈಕೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಅಥವಾ ಮುಂದಿನ ದಿನಗಳಲ್ಲಿ ಹಾನಿ ಮಾಡುವ ಸಾಧ್ಯತೆ ಹೆಚ್ಚಿತ್ತು. ಆದರೆ, ಅದು ಸಂಭವಿಸಲಿಲ್ಲ ಎಂದು ತಜ್ಞರ ಅಭಿಪ್ರಾಯಾಗಿದೆ.(ಏಜೆನ್ಸೀಸ್)