ಬೆಂಗಳೂರು: 2016ಕ್ಕೂ ಪೂರ್ವದಲ್ಲಿ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರನ್ನು 2017ರ ವೃಂದ ಮತ್ತು ನೇಮಕಾತಿ ನಿಯಮಗಳಂತೆ 1ರಿಂದ 5 ನೇ ವರ್ಗಕ್ಕೆ ಸೀಮಿತಗೊಳಿಸಿ ಪೂರ್ವಾನ್ವಯಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ಸರ್ಕಾರದ ಕಾನೂನು ಇಲಾಖೆ ಅಭಿಪ್ರಾಯಪಟ್ಟಿರುವುದಾಗಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ತಿಳಿಸಿದೆ.
ಕಾನೂನು ಇಲಾಖೆಯ ಈ ಅಭಿಪ್ರಾಯವು ಕಳೆದ ಏಳು ವರ್ಷಗಳಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಡೆಸುತಿದ್ದ ಹೋರಾಟಕ್ಕೆ ಶಕ್ತಿ ನೀಡಿದೆ ಎಂದು ಸಂಘದ ಅಧ್ಯಕ್ಷ ಕೆ. ನಾಗೇಶ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.
ಯಾವುದೇ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ಅನ್ವಯವಾಗಲಿದ್ದು, ಅದರನ್ವಯ ಪ್ರಸ್ತುತ ಪ್ರಕರಣದಲ್ಲಿ 2017ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಗೊಂಡ ಶಿಕ್ಷಕರಿಗೆ ಪೂರ್ವಾನ್ವಯಗೊಳಿಸುವುದು ಸರಿಯಾದ ಕ್ರಮವಲ್ಲ, ಪ್ರತಿ ನೌಕರನಿಗೂ ನೇಮಕಗೊಂಡ ಸಮಯದಲ್ಲಿ ಜಾರಿಯಲ್ಲಿದ್ದ ನಿಯಮಗಳನ್ನು ಅನ್ವಯವಾಗಲಿವೆ ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ ಎಂದು ತಿಳಿಸಿದ್ದಾರೆ.
2017ರ ನೇಮಕಾತಿ ನಿಯಮದಂತೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1 ರಿಂದ 5 ನೇ ವರ್ಗಕ್ಕೆ ಸೀಮಿತಗೊಳಿಸಿ ಸರ್ಕಾರ ಆದೇಶಿಸಿತ್ತು. ಇದರಿಂದ ಮುಖ್ಯ ಶಿಕ್ಷಕರ ಹುದ್ದೆ, ಪ್ರೌಢಶಾಲಾ ಸಹಶಿಕ್ಷರ ಹುದ್ದೆಯ ಪದೋನ್ನತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರು ವಂಚಿತಗೊಂಡು ಯಾವುದೇ ಪದೋನ್ನತಿಯಿಲ್ಲದೇ ಶಿಕ್ಷಕರು ನಿವೃತ್ತಿಹೊಂದಬೇಕಿದೆ.
2024ರ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅನ್ಯಾಯ ಸರಿಪಡಿಸುವ ಭರವಸೆ ನೀಡಿದ್ದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿಯು ಕಾನೂನು ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಆರ್ಥಿಕ ಇಲಾಖೆಗೆ ಅಭಿಪ್ರಾಯ ಕೋರಲಾಗಿತ್ತು. ಈಗ ಕಾನೂನು ಇಲಾಖೆಯು ಅಭಿಪ್ರಾಯ ತಿಳಿಸಿದೆ.
2017 ಕ್ಕಿಂತ ಮೊದಲು ನೇಮಕವಾಗಿರುವವರಿಗೆ ಬಡ್ತಿ ನೀಡಬೇಕು. ಪದವಿ ಪಡೆದ 58 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ವೇತನ ಬಡ್ತಿ ನೀಡುವಂತೆ ಸಂಘವು ಒತ್ತಾಯಿಸಿದೆ.