ನ್ಯೂಸ್

ಸರ್ಕಾರಿ ನೌಕರರಿಗೆ ಡಿಎ ಗಿಫ್ಟ್: ಶೇ. 11 ತುಟ್ಟಿಭತ್ಯೆ ಹೆಚ್ಚಳ, 13.5 ಲಕ್ಷ ಮಂದಿಗೆ ಲಾಭ..

ಬೆಂಗಳೂರು: ಕರೊನಾ ಸಾಂಕ್ರಾಮಿಕದ ಕಾರಣಕ್ಕೆ ತಡೆ ಹಿಡಿಯಲ್ಪಟ್ಟಿದ್ದ ತುಟ್ಟಿಭತ್ಯೆ ಬಿಡುಗಡೆ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಿದ್ದಾರೆ. ಕರೊನಾ ಕಾರಣದಿಂದ 2020ರ ಜನವರಿಯಿಂದ ತುಟ್ಟಿಭತ್ಯೆ ತಡೆ ಹಿಡಿದ ಪರಿಣಾಮ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕಳೆದ ಮೂರು ಕಂತುಗಳ ತುಟ್ಟಿಭತ್ಯೆ ಲಭ್ಯವಾಗಿರಲಿಲ್ಲ. ಅಖಿಲ ಭಾರತ ಸೂಚ್ಯಂಕ ಆಧರಿಸಿ ಕೇಂದ್ರ ಸರ್ಕಾರ ಕಳೆದ ವಾರ ತನ್ನ ನೌಕರರ ಶೇ.11ರಷ್ಟು ತುಟ್ಟಿಭತ್ಯೆ ಘೋಷಣೆ ಮಾಡಿತ್ತು.

ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಸಹ ಮಂಜೂರು ಮಾಡಬೇಕೆಂಬ ಬೇಡಿಕೆ ಇತ್ತು. ಮಂಗಳವಾರ ಬೆಳಗ್ಗೆಯಷ್ಟೇ ಕೇಂದ್ರದ ತುಟ್ಟಿಭತ್ಯೆ ಸಂಬಂಧದ ಆದೇಶ ಪ್ರಕಟಗೊಂಡಿತ್ತು. ಬಳಿಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮನವಿ ಸಲ್ಲಿಸಿತ್ತು. ತಕ್ಷಣವೇ ಬಾಕಿ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿಯವರಿಗೆ ಸಿಎಂ ಆದೇಶಿಸಿದರು. ಈ ಬಗ್ಗೆ ವಿಜಯವಾಣಿಗೆ ಮಾಹಿತಿ ನೀಡಿದ ಸಿ.ಎಸ್. ಷಡಾಕ್ಷರಿ, ಇದೊಂದು ಐತಿಹಾಸಿಕ ತೀರ್ಮಾನ ಎಂದು ಭಾವಿಸುವೆ. ಕರೊನಾ ಸಂದರ್ಭದಲ್ಲಿ ತುಟ್ಟಿಭತ್ಯೆ ಕೊಡಬೇಕೆಂದು ನಾವು ಸರ್ಕಾರಕ್ಕೆ ಒತ್ತಡ ಹೇರದೆ ಸಹಕರಿಸಿದ್ದೆವು. ಇದೀಗ ಬಿಡುಗಡೆ ಮಾಡುವಂತೆ ಮನವಿ ಮಾಡಿದ ತಕ್ಷಣವೇ ಸಿಎಂ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದರು.

250 ಕೋಟಿ ರೂ. ಹೊರೆ: ಸರ್ಕಾರಿ ನೌಕರರು, ನಿಗಮ ಮಂಡಳಿ ನೌಕರರು, ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿರುವುದರಿಂದ ಸರ್ಕಾರಕ್ಕೆ 250 ಕೋಟಿ ರೂ. ಹೊರೆ ಬೀಳಲಿದೆ.

ಯಾರಿಗೆ ಅನುಕೂಲ?

  • 6 ಲಕ್ಷ ಸರ್ಕಾರಿ ನೌಕರರು
  • 3 ಲಕ್ಷ ನಿಗಮ ಮಂಡಳಿ ನೌಕರರು
  • 4.50 ಲಕ್ಷ ಪಿಂಚಣಿದಾರರು

ಶೀಘ್ರ ಪ್ರಕ್ರಿಯೆ: ಮುಖ್ಯಮಂತ್ರಿ ಸೂಚನೆಯು ಆರ್ಥಿಕ ಇಲಾಖೆ ಮೂಲಕ 2-3 ದಿನಗಳಲ್ಲಿ ಸರ್ಕಾರಿ ಆದೇಶವಾಗಿ ಹೊರಬೀಳಲಿದೆ. ಜು.1ರಿಂದ ಮಂಜೂರಾಗುವ ತುಟ್ಟಿಭತ್ಯೆ ಮೂಲ ವೇತನದಲ್ಲಿ ಸೇರ್ಪಡೆಗೊಳ್ಳಲಿದೆ.

ಡಿಎ ಹೆಚ್ಚಳದ ಲೆಕ್ಕಾಚಾರ: ಸರಾಸರಿ 50-60 ಸಾವಿರ ವೇತನ ಪಡೆಯುವ ನೌಕರರ ಸಂಖ್ಯೆ ಹೆಚ್ಚಿದ್ದು, ಅವರಿಗೆ 5-6 ಸಾವಿರ ಹೆಚ್ಚಾಗಲಿದೆ. ಒಂದು ಲಕ್ಷ ಪಡೆಯುವವರಿಗೆ 10 ಸಾವಿರ ಅಧಿಕವಾಗಲಿದೆ. ನಿವೃತ್ತ ನೌಕರರಿಗೆ ಸರಾಸರಿ 2.5 ಸಾವಿರದಿಂದ 4 ಸಾವಿರ ರೂ.ವರೆಗೆ ಪಿಂಚಣಿ ಹೆಚ್ಚಾಗಲಿದೆ.

ಜು.1ರಿಂದ ಶೇ.11 ತುಟ್ಟಿಭತ್ಯೆ ಹೆಚ್ಚಿಸಲು ತೀರ್ಮಾನ ಕೈಗೊಂಡ ಮುಖ್ಯಮಂತ್ರಿಯವರಿಗೆ ಸಮಸ್ತ ಸರ್ಕಾರಿ ನೌಕರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

| ಸಿ.ಎಸ್.ಷಡಾಕ್ಷರಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ