ನ್ಯೂಸ್

ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಸಿಹಿಸುದ್ದಿ...

ನವದೆಹಲಿ: ಕರೊನಾ ಸೋಂಕಿನ ಹಾವಳಿಯ ಬೇಸರದ ನಡುವೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಸಿಹಿಸುದ್ದಿ. ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನೌಕರರಿಗೆ ಈ ಸಂತಸದ ಸುದ್ದಿ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಲೀವ್​ ಟ್ರಾವೆಲ್​ ಕನ್ಷೆಷನ್​ (ಎಲ್​ಟಿಸಿ) ಯೋಜನೆಯನ್ನು 2022ರ ಸೆಪ್ಟೆಂಬರ್​ ವರೆಗೂ ವಿಸ್ತರಿಸಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ.

ಈ ಯೋಜನೆ ಪ್ರಕಾರ ಕೇಂದ್ರ ಸರ್ಕಾರಿ ನೌಕರರು ಜಮ್ಮು-ಕಾಶ್ಮೀರ, ಲಡಾಖ್​, ಅಂಡಮಾನ್​ ಮತ್ತು ನಿಕೋಬಾರ್ ಹಾಗೂ ಈಶಾನ್ಯ ರಾಜ್ಯಗಳಿಗೆ ವಿಮಾನದಲ್ಲಿ ಪ್ರಯಾಣಿಸಬಹುದು. ಸೆಂಟ್ರಲ್​ ಸಿವಿಲ್ ಸರ್ವಿಸಸ್​ (ಎಲ್​ಟಿಸಿ) ರೂಲ್ಸ್​ 1988 ಅನ್ವಯ ಇದನ್ನು ಇನ್ನು ಎರಡು ವರ್ಷಗಳ ಕಾಲ ಎಂದರೆ 2022ರ ಸೆ. 25ರ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಸರ್ಕಾರದ ಏರ್​ ಇಂಡಿಯಾ ಮಾತ್ರವಲ್ಲದೆ ಖಾಸಗಿ ವಿಮಾನಗಳ ಮೂಲಕವೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಪ್ರದೇಶಗಳನ್ನೇ ಊರಾಗಿ ಅಥವಾ ಕಾರ್ಯಸ್ಥಾನವಾಗಿ ಹೊಂದಿರುವವರಿಗೆ ಇದು ಅನ್ವಯಿಸುವುದಿಲ್ಲ ಎಂಬುದಾಗಿ ಸಚಿವರು ತಿಳಿಸಿದ್ದಾರೆ. (ಏಜೆನ್ಸೀಸ್​)