ನ್ಯೂಸ್

ಸಂಪಾದಕೀಯ: ವರ್ಗಾವಣೆ ಭಾಗ್ಯ ಕಲ್ಪಿಸಿ

ಬಾಬುಪ್ರಸಾದ್​ ಮೋಡಿಸ್​

ಸರ್ಕಾರದ ಯಾವುದೇ ಇಲಾಖೆಗಳಾಗಲಿ ನಿಯಮಗಳನ್ನು ರೂಪಿಸುವಾಗ ಮಾನವೀಯ ನೆಲೆಯಿಂದ ಯೋಚಿಸಬೇಕು ಮತ್ತು ಹೊಸ ನಿಯಮ ಸಿಬ್ಬಂದಿಯ ಸ್ಥೈರ್ಯವನ್ನು ಕುಂದಿಸುವಂತೆ ಇರಬಾರದು. ಪೊಲೀಸ್ ಇಲಾಖೆಯ ಹೊಸ ಆದೇಶವೊಂದು ಈಗ ವಿವಾದ ಸೃಷ್ಟಿಸಿರುವುದಲ್ಲದೆ, ಸಿಬ್ಬಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಮಂತ್ರಿಗಳು ಮತ್ತು ಶಾಸಕರನ್ನು ಜನಸಾಮಾನ್ಯರು ಸೇರಿದಂತೆ ಸರ್ಕಾರಿ ಸಿಬ್ಬಂದಿ ಭೇಟಿಯಾಗುವುದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ, ಅವುಗಳಿಗೆ ಪರಿಹಾರ ಪಡೆದುಕೊಳ್ಳುವುದಕ್ಕೆ. ಆದರೆ, ಈ ಪ್ರಮುಖ ಆಶಯಕ್ಕೆ ಬೆನ್ನು ತಿರುಗಿಸಿದರೆ ಸಮಸ್ಯೆ ಹೊತ್ತವರು ಯಾರ ಬಳಿ ತೆರಳಬೇಕು?

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡುವ ಮುನ್ನ ಪೊಲೀಸ್ ಪ್ರಧಾನ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವೆಂದು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅನ್ವಯಿಸುವಂತೆ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಅಂತರ ಜಿಲ್ಲಾ ವರ್ಗಾವಣೆಗೆ ಒಂಬತ್ತು ವರ್ಷದಿಂದ ಕಾಯುತ್ತಿರುವ ಕಾನ್​ಸ್ಟೆಬಲ್​ಗಳು ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ, ವರ್ಗಾವಣೆ ಕೋರಿಕೆ ಇರಿಸಿಕೊಂಡು ಗೃಹ ಸಚಿವರನ್ನು ಭೇಟಿ ಮಾಡಬಾರದು ಎನ್ನುವ ಉದ್ದೇಶದಿಂದ ಹೊಸ ಆದೇಶ ಹೊರಡಿಸಲಾಗಿರುವುದು ಈಗ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ.

ಅಷ್ಟಕ್ಕೂ ನಿಯಮಗಳಿಗೆ ಅನುಸಾರವಾಗಿ ವರ್ಗಾವಣೆ ನೀಡಲು ಏನು ಅಡ್ಡಿ? 2016ರಲ್ಲಿ ನೇಮಕಗೊಂಡ ಪೊಲೀಸ್ ಪೇದೆಗಳು ಅಂತರ ಜಿಲ್ಲಾ ವರ್ಗಾವಣೆಗೆ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. 3 ವರ್ಷ ಸೇವೆ ಪೂರ್ಣಗೊಳಿಸಿದವರಿಗೆ ಅಂತರ ಜಿಲ್ಲಾ ವರ್ಗಾವಣೆಗೊಳಿಸಬಹುದು ಎಂಬ ನಿಯಮವನ್ನು 5 ವರ್ಷಕ್ಕೆ, ಆ ಬಳಿಕ 7 ವರ್ಷಕ್ಕೆ ಮಾರ್ಪಡಿಸಲಾಯಿತು.

ಆದರೆ, 9 ವರ್ಷವಾದರೂ ವರ್ಗಾವಣೆ ಭಾಗ್ಯ ಸಿಗದೆ ಕಾನ್​ಸ್ಟೆಬಲ್​ಗಳು ಹೈರಾಣಾಗಿದ್ದಾರೆ. ಎಲ್ಲರಿಗೂ ವೃತ್ತಿ ಬದುಕಿನ ಜತೆ ಕೌಟುಂಬಿಕ ಜೀವನವೂ ಇರುತ್ತದೆ. ವಯಸ್ಸಾದ ತಂದೆ-ತಾಯಿ ಅಥವಾ ಪತ್ನಿ-ಮಕ್ಕಳನ್ನು ಬಿಟ್ಟು ದೀರ್ಘಾವಧಿಯವರೆಗೆ ಬೇರೆ ಸ್ಥಳಗಳಲ್ಲಿ ಕೆಲಸ ಮಾಡುವುದು ನಿಜವಾದ ಸವಾಲೇ ಹೌದು. ಅದರಲ್ಲೂ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುವ ಪೊಲೀಸರಿಗೆ ಕೆಲಸದ ಒತ್ತಡವೂ ಇರುತ್ತದೆ.

ಇಂಥ ಸಂದರ್ಭದಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಗೃಹ ಸಚಿವರೇ ಇಲಾಖೆಗೆ ಸೂಚಿಸಬಹುದಿತ್ತು. ಆದರೆ, ಭೇಟಿಗೆ ನಿರ್ಬಂಧ ವಿಧಿಸುವ ಭಾಗವಾಗಿ ಪೂರ್ವಾನುಮತಿ ಕಡ್ಡಾಯಗೊಳಿಸಿರುವುದು ಸರಿಯಲ್ಲ. ಇನ್ನೂ ಕಾಲ ಮಿಂಚಿಲ್ಲ. ಗೃಹ ಇಲಾಖೆ ಪೊಲೀಸರ ಮನವಿಗೆ ಸ್ಪಂದಿಸಲಿ. ಯಾರಿಗೆ ಅರ್ಹತೆ ಮತ್ತು ನಿಯಮಗಳ ಅನುಸಾರ ವರ್ಗಾವಣೆ ನೀಡಲು ಸಾಧ್ಯವಿದೆಯೋ ಅಂಥವರಿಗೆ ಯಾವ ಕಾರಣ ಹೇಳದೆ ವರ್ಗಾವಣೆ ಭಾಗ್ಯ ಕಲ್ಪಿಸಲಿ.