ಭದ್ರಾವತಿ: ವಿಜ್ಞಾನ, ತಂತ್ರಜ್ಞಾನ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಚೀನಾ ನಂಬರ್ ಒನ್ ಸ್ಥಾನದಲ್ಲಿದೆ. ಭಾರತವೂ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ ಎಂದು ಕುವೆಂಪು ವಿವಿ ಉಪ ಕುಲಪತಿ ಡಾ. ಶರತ್ ಅನಂತಮೂರ್ತಿ ತಿಳಿಸಿದರು.
ನಗರದ ಉಂಬ್ಳೇಬೈಲು ರಸ್ತೆಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 7ನೇ ಪ್ರಾಂತೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಈಗಿನ ಪೀಳಿಗೆಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಹಾಗೂ ನಮ್ಮಲ್ಲಿರುವ ತಪ್ಪುಗಳನ್ನು ತಿದ್ದಿಕೊಂಡು ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕು ಎಂದು ತಿಳಿಸಿದರು.
ವಾಗ್ಮಿ ಡಾ. ಕೆ.ಪಿ.ಪುತ್ತೂರಾಯ ಮಾತನಾಡಿ, ಯಾವುದೇ ಸಂಘ ಸಂಸ್ಥೆಗಳಿಗೆ ಸದಸ್ಯರ ಸಂಖ್ಯೆ ಮುಖ್ಯವಲ್ಲ. ಸಹಮತ, ಸಹಕಾರ, ಸಂಘಟನೆಗಳು ಮುಖ್ಯವಾಗುತ್ತವೆ. ಸಂಘದಲ್ಲಿ ಸದ್ಭಾವನೆ, ಸದ್ವಿಚಾರ ಇದ್ದರೆ ಸೇವಾ ಭಾವನೆ ಸಹಜವಾಗಿ ಬರುತ್ತದೆ. ಸನಾತನ ಸಂಪ್ರದಾಯಗಳ ಪರಂಪರೆ ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ ಮಾತ್ರ ಇಂತಹ ಗುಣಗಳನ್ನು ಕಾಣಲು ಸಾಧ್ಯ. ಆ ಮೂಲಕ ವಿಶ್ವಕ್ಕೆ ಭಾರತವು ವಿಶ್ವ ಗುರುವಾಗಿದೆ ಎಂದರು.
ಇಂದು ಮಕ್ಕಳಿಗೆ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡುತ್ತಿದ್ದೇವೆಯೇ ಹೊರತು ಸುಸಂಸ್ಕೃತರನ್ನಾಗಿ ಮಾಡುತ್ತಿಲ್ಲ. ಮನುಷ್ಯತ್ವ, ಮಾನವೀಯ ಗುಣಗಳನ್ನು ಕಲಿಸುತ್ತಿಲ್ಲ. ಶಿಕ್ಷಣ ಬೇರೆ, ಸಂಸ್ಕಾರ ಬೇರೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ದೊರೆಯುತ್ತದೆ. ಆದರೆ ಸಂಸ್ಕಾರವನ್ನು ಮನೆಯಲ್ಲೇ ನೀಡಬೇಕು. ಎಷ್ಟೇ ಮುಂದುವರಿದ ದೇಶವಾದರೂ ಜಾತೀಯತೆ ಹೋಗಿಲ್ಲ. ಇದು ಸಮಾಜದ ಬಹುದೊಡ್ಡ ಶತ್ರು. ಪ್ರತಿಭೆ ಎಂಬುದು ಗೌಣವಾಗಿದೆ. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು ಎಂದು ತಿಳಿಸಿದರು.
ಸಮ್ಮೇಳನದ ನೆನಪಿಗಾಗಿ ಹೊಲಿಗೆ ಯಂತ್ರಗಳನ್ನು ನೀಡಲಾಯಿತು. ಲಯನೆಸ್ ಚಂದು ಮಹೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಡಿ.ಪ್ರಭುದೇವ್, ಹೆಬ್ಬಂಡಿ ನಾಗರಾಜ್, ಕೆ.ಎಚ್.ರವಿಕುಮಾರ್, ಎ.ಎನ್.ಕಾರ್ತಿಕ್, ಪರಮೇಶ್ವರಪ್ಪ, ರಾಮಮೂರ್ತಿ, ಎನ್.ಶಿವಕುಮಾರ್, ಕೆ.ಜಿ.ರಾಜ್‌ಕುಮಾರ್ ಇತರರಿದ್ದರು.