ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಸಭಾಂಗಣದಲ್ಲಿ ಸಂತ ಅಲೋಶಿಯಸ್ ಗೊನ್ಝಾಗ ರವರ ಸಂಸ್ಮರಣಾ ಹಬ್ಬ ಕಾರ್ಯಕ್ರಮ ನಡೆಯಿತು. 
ನ್ಯೂಸ್

ಗೊನ್ಝಾಗರ ಆದರ್ಶ ಪಾಲನೆ ಅಗತ್ಯ

Shravan Kumar Nala
ಮಂಗಳೂರು: ಸಂತ ಅಲೋಶಿಯಸ್ ಗೊನ್ಝಾಗ ಅವರ ತತ್ವಗಳಾದ ನಿಸ್ವಾರ್ಥ ಸೇವೆ, ಪರಿಶುದ್ಧತೆ ಮತ್ತು ದೇವರ ಮೇಲಿನ ಭಕ್ತಿಯನ್ನು ಅನುಸರಿಸುತ್ತಾ, ವಿದ್ಯಾರ್ಥಿಗಳು ಕನಸು, ಸಮರ್ಪಣೆ ಹಾಗೂ ಶಿಸ್ತು- ಈ ಮೂರು ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂತ ಅಲೋಶಿಯಸ್ ಸಂಸ್ಥೆಯ ರೆಕ್ಟರ್ ಬ್ರಾಯೆನ್ ಪಿರೇರಾ ಎಸ್.ಜೆ ಹೇಳಿದರು.
ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಸಭಾಂಗಣದಲ್ಲಿ ಜರಗಿದ ಸಂತ ಅಲೋಶಿಯಸ್ ಗೊನ್ಝಾಗ ರವರ ಸಂಸ್ಮರಣಾ ಹಬ್ಬಕ್ಕೆ ಸರ್ವ ಧರ್ಮ ಪ್ರಾರ್ಥನೆಯ ಮೂಲಕ ಚಾಲನೆ ನೀಡಿ ಮಾತನಾಡಿದರು .
ಶಾಲಾ ಪ್ರಾಂಶುಪಾಲರಾದ ಫಾ. ರೋಹನ್ ಡಿ’ಅಲ್ಮೇಡಾ ಎಸ್. ಜೆ ಅವರು, ಸಂತ ಅಲೋಶಿಯಸ್ ಗೊನ್ಝಾಗ ಅವರ ನಿಸ್ವಾರ್ಥ ಸೇವೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಾ, ಸಂತ ಅಲೋಶಿಯಸ್ ಗೊನ್ಝಾಗ ಅವರಂತೆ ಪ್ರತಿಯೊಬ್ಬರೂ ಮಾನವಕುಲಕ್ಕೆ ಸೇವೆ ಸಲಿಸುವುದನ್ನೇ ತಮ್ಮ ಜೀವನದ ಗುರಿಯನ್ನಾಗಿಸಬೇಕು ಎಂದರು.
ಸಂತ ಅಲೋಶಿಯಸ್ ಸಂಸ್ಥೆಯ ನೂತನ ರೆಕ್ಟರ್ ಆಗಿ ಆಯ್ಕೆಯಾದ ಬ್ರಾಯೆನ್ ಪಿರೇರಾ ಎಸ್. ಜೆ. ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಅವರನ್ನು ಗೌರವಿಸಲಾಯಿತು.
ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಾಲಾ ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಶೌರ್ಯ ಕುಮಾರ್ ಅವರು ಯೋಗ ಪ್ರದರ್ಶನ ನೀಡಿದರು.
ವಿದ್ಯಾರ್ಥಿಗಳಿಂದ ಸುಂದರ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿಸಲ್ಪಟ್ಟವು. ಈ ಸಂದರ್ಭದಲ್ಲಿ ಶಾಲಾ ಉಪ ಪ್ರಾಂಶುಪಾಲರಾದ ಲಾರೆಲ್ ಡಿಸೋಜಾ ಹಾಗೂ ಸುರೇಶ್ ಅಪರ್ಣ ಸುರೇಶ್, ಶಾಲಾ ಶೈಕ್ಷಣಿಕ ಸಂಯೋಜಕರಾದ ದೀಪ ಕರ್ಕಡಾ, ದೀಪ್ತಿ ಕರ್ಕಡಾ ಹಾಗೂ ಕ್ಯಾರೆಲ್ ರೋಡ್ರಿಗಸ್ ಹಾಗೂ ರಕ್ಷಕ-ಶಿಕ್ಷಕ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ ರೀನಾ ನೊರೋನ್ಹಾ, ಕಾರ್ಯದರ್ಶಿಗಳಾದ ಕ್ವೀನಿ ಫೆನಾರ್ಂಡೀಸ್ ಉಪಸ್ಥಿತರಿದ್ದರು.