ನ್ಯೂಸ್

ಮರಡಿಯೂರು ಗ್ರಾಮದಲ್ಲಿ ಗೋಮಾಳ ಸರ್ವೇ

ಎ. ಆರ್. ರಘುರಾಮ

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಡಿಯೂರು ಗ್ರಾಮದಲ್ಲಿ ಗೋಮಾಳದ ಜಾಗದಲ್ಲಿ ಗೋಶಾಲೆ ನಿರ್ಮಾಣಕ್ಕಾಗಿ 6 ಎಕರೆ ಜಮೀನನ್ನು ಬುಧವಾರ ಸರ್ವೇ ಮಾಡಿ ಹುದ್ದುಬಸ್ತು ನಿಗದಿಗೊಳಿಸಲಾಯಿತು.
ಗ್ರಾಮಕ್ಕೆ ಇತ್ತೀಚೆಗೆ ಕುಂದುಕೊರತೆ ಆಲಿಸಲು ಆಗಮಿಸಿದ್ದ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರ ಎದುರು ಗ್ರಾಮಸ್ಥರು ಈ ಸಂಬಂಧ ಮನವಿ ಮಾಡಿದ್ದರು. ಅಲ್ಲದೆ, ಗೋಮಾಳದಲ್ಲಿನ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅಳತೆ ಮಾಡಿಸಿ ಒತ್ತುವರಿ ತೆರವು ಮಾಡಿಸಿಕೊಡಿ ಎಂದು ಮನವಿ ಮಾಡಿದ್ದರು. ಸ್ಥಳದಲ್ಲಿದ್ದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಅದರಂತೆ, ತಹಸೀಲ್ದಾರ್ ಕು.ಇ್ಞ.ಅಹಮದ್ ಆದೇಶದ ಮೇರೆಗೆ ತಾಲೂಕು ಸರ್ವೇ ಅಧಿಕಾರಿ ಗಿರೀಶ್ ನೇತೃತ್ವದಲ್ಲಿ ಜಮೀನಿನ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಿ ಗ್ರಾಮ ಪಂಚಾಯಿತಿ ಸುಪರ್ದಿಗೆ ವಹಿಸಲಾಯಿತು. ಅವರ್ತಿ ಪಿಡಿಒ ಅಭಿ ಮಹಮ್ಮದ್, ಗ್ರಾಮ ಲೆಕ್ಕಾಧಿಕಾರಿ ಸುನೀಲ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ.ಶಿವು, ಸದಸ್ಯರಾದ ಮಂಜು, ಹೇಮಂತ್ ಕುಮಾರ್, ಸರ್ವೇ ಇಲಾಖೆ ಸಿಬ್ಬಂದಿ ಅಶೋಕ, ಸಂತೋಷ್, ಗ್ರಾಪಂ ಸಿಬ್ಬಂದಿ ಯೋಗೇಶ್, ಪೊಲೀಸ್ ಇಲಾಖೆ ಸಿಬ್ಬಂದಿ ಮಂಜು, ಅನಿತಾ ಮತ್ತಿತರರು ಈ ವೇಳೆ ಹಾಜರಿದ್ದರು.