ಅನಿಲ್‌ಕುಮಾರ್ 
ನ್ಯೂಸ್

ಗೋಮಾಳಕ್ಕೆ ನಕಲಿ ದಾಖಲೆ ಸೃಷ್ಟಿ ಆರೋಪ

ಕೋಲಾರ: ಮಾಲೂರು ನಗರ ಪ್ರದೇಶಕ್ಕೆ ಹೊಂದಿಕೊಂಡ ಸರ್ವೇ ನಂ. 112ರ 2 ಎಕರೆ 20 ಗುಂಟೆ ಗೋಮಾಳ ಜಮೀನನ್ನು ನಕಲಿ ದಾಖಲೆ ಸೃಷ್ಟಿ ಮಾಡಿ ಖಾತೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದ್ದು, ಇನ್ನೊಮ್ಮೆ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಿ ಸೂಕ್ತ ಕಠಿಣ ಕ್ರಮ ವಹಿಸುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಬೆಳಗಾವಿಯಲ್ಲಿನ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಬುಧವಾರ ವಿಧಾನ ಪರಿಷತ್​ ಸದಸ್ಯ ಎಂಎಲ್​. ಅನಿಲ್​ ಕುಮಾರ್​ ಅವರು, ಕೋಲಾರ ಜಿಲ್ಲೆಯ ಎಲ್ಲ ತಾಲೂಕುಗಳ ಸರ್ವೇ ಇಲಾಖೆ ಮತ್ತು ಕಂದಾಯ ಇಲಾಖೆಗಳಲ್ಲಿ ನಕಲಿ ದಾಖಲೆಗಳ ಸೃಷ್ಟಿ ದಂಧೆಯಲ್ಲಿ ಸರ್ವೇ ಮೇಲ್ವಿಚಾರಕ ಸುರೇಶ್​ ಬಾಬು ಭಾಗಿಯಾಗಿರುವುದು ಸಾಬೀತಾಗಿದ್ದು, ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಕೃಷ್ಣಬೈರೇಗೌಡ, ಮಾರಸಂದ್ರ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶ ಪಾಲಿಸಬೇಕು. ಬೇರೆ ರೀತಿ ಕ್ರಮವಹಿಸಿದ್ದಲ್ಲಿ ಹಾಗೂ ತೊರ್ನಹಳ್ಳಿ ಅಗ್ರಹಾರ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದುರಸ್ತಿಯಾಗಿಲ್ಲ. ಸದಸ್ಯರ ಆರೋಪದಂತೆ ದುರಸ್ತಿಯಾಗಿದ್ದರೆ ಈ ಎಲ್ಲ ಪ್ರಕರಣಗಳನ್ನು ಬೆಂಗಳೂರಿನ ಪ್ರಾದೇಶಿಕ ಆಯುಕ್ತರಿಗೆ ವಹಿಸಿ ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ನಕಲಿ ಖಾತೆಗೆ ಸಂಬಂಧಿಸಿದಂತೆ 2021ರಲ್ಲಿ ಸುರೇಶ್​ ಬಾಬು ವಿರುದ್ಧ ಬಂಗಾರಪೇಟೆ ತಾಲೂಕಿನಲ್ಲಿ ಪ್ರಕರಣ ದಾಖಲಾಗಿದ್ದರೂ ಬಂಧಿಸದಂತೆ ಕೋರ್ಟ್​ ನೋಟಿಸ್​ ತಂದ ಕಾರಣ ಯಾವುದೇ ಕ್ರಮವಹಿಸಲು ಸಾಧ್ಯವಾಗಿರಲಿಲ್ಲ. ಆದರೆ ಮಾಲೂರು ನಗರ ಪ್ರದೇಶಕ್ಕೆ ಹೊಂದಿಕೊಂಡಿದ್ದ ಸರ್ವೇ ನಂಬರ್​ 112ರ 2 ಎಕರೆ 20 ಗುಂಟೆ ಗೋಮಾಳಕ್ಕೆ ನಕಲಿ ದಾಖಲೆ ಸೃಷ್ಟಿ ಮಾಡಿ ಖಾತೆ ಮಾಡಿ, ಬಳಿಕ ಅವರ ತಾಯಿಯ ಹೆಸರಿಗೆ ಸೇಲ್​ ಅಗ್ರಿಮೆಂಟ್​ ಮಾಡಿಸಿಕೊಂಡಿದ್ದರು. ಇದಲ್ಲದೇ ಮಾರಸದ್ರ ಗ್ರಾಮದ ಸರ್ವೇ ನಂ.10ರ ರೀ ಸರ್ವೇ ನಂ.ನಲ್ಲಿ 4 ಎಕರೆ ಮತ್ತು ಸ.ನಂಬರ್​ 161ರ 2 ಎಕರೆ 22 ಗುಂಟೆ, ನಿದರಮಂಗಲ ಸರ್ವೇ ನಂ. 155ರ ಪೈಕಿ ಸುಮಾರು 12 ಎಕರೆ ಜಮೀನಿನ ಸರ್ಕಾರಿ ಸುತ್ತೋಲೆ ಬದಿಗೊತ್ತಿ, ಪೊಡಿ ದುರಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ, ತೊರ್ನಹಳ್ಳಿ ಅಗ್ರಹಾರ ಸರ್ವೇ ನಂ.21ರಲ್ಲಿ ಖಾಲಿ ಇದ್ದ 7 ಎಕರೆ ಜಮೀನಿಗೆ ಭೂ&ದಾಖಲೆಗಳ ಉಪ ನಿರ್ದೇಶಕರ ಕಚೇರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳರ ಪಾಲಾಗುವಂತೆ ಮಾಡಿ ಸುರೇಶ್​ ಬಾಬು ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಅನಿಲ್​ಕುಮಾರ ಸದನದಲ್ಲಿ ಧ್ವನಿಯೆತ್ತಿದ್ದರು.

ಮಾಲೂರು ತಾಲೂಕಿನ ಯಶವಂತಪುರದ ನೂತನ ಲೇಔಟ್​ ನಿರ್ಮಾಣಕ್ಕೆ ಸರ್ವೇಯರ್​ ಮತ್ತು ಎಡಿಎಲ್​ಆರ್​ ಸಹಿಯನ್ನು ನಕಲು ಮಾಡಿ ಸರ್ಕಾರಕ್ಕೆ ವಂಚಿಸಿರುವುದು ಸೇರಿ ಹಲವು ಅಕ್ತಮಗಳಲ್ಲಿ ಸುರೇಶ್​ ಬಾಬು ಭಾಗಿಯಾಗಿದ್ದು, ಅವರ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಕಂದಾಯ ಸಚಿವರನ್ನು ಅನಿಲ್​ಕುಮಾರ್​ ಪ್ರಶ್ನಿಸಿದರು. ಇದಲ್ಲದೇ ಕೋಲಾರ ತಾಲೂಕು ಚೆಲುವನಹಳ್ಳಿ ಗ್ರಾಮಕ್ಕೆ ಸಂಬಂಧಿಸಿದ 40 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಕೊಂಡಿದ್ದು, ಇದನ್ನು ಪರಿಶೀಲಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಸ್ಥಳವನ್ನು ಮಂಜೂರು ಮಾಡಿರುವ ಉದಾಹರಣೆಗಳನ್ನು ಸಹ ಅನಿಲ್​ ಕುಮಾರ್​ ಸಭೆಯಲ್ಲಿ ನೀಡಿದರು.