ಗೋಲ್ಡನ್ ಸ್ಟಾರ್ ಗಣೇಶ್​ 
ನ್ಯೂಸ್

Ganesh Interview - ಹುಟ್ಟುಹಬ್ಬದ ಸಂಭ್ರಮದಲ್ಲಿ ಐದು ಚಿತ್ರಗಳ ಅಪ್​ಡೇಟ್ ನೀಡಿದ ಗೋಲ್ಡನ್ ಸ್ಟಾರ್

Ganesh Interview -
"ಕೃಷ್ಣಂ ಪ್ರಣಯ ಸಖಿ' (2024) ಯಶಸ್ಸಿನ ಬಳಿಕ ನಟ ಗಣೇಶ್​ ನಟಿಸಿರುವ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಹಾಗಂತ ಗಣೇಶ್​ ಎರಡು ವರ್ಷಗಳಿಂದ ಬ್ರೇಕ್​ನಲ್ಲಿದ್ದಾರೆ ಅಂತಲ್ಲ. ಬದಲಾಗಿ ಬ್ಯಾಕ್​ ಟು ಬ್ಯಾಕ್​ ಐದು ಚಿತ್ರಗಳಲ್ಲಿ ಬಿಜಿಯಿದ್ದಾರೆ. ಇಂದು 48ನೇ ವಸಂತಕ್ಕೆ ಕಾಲಿಡುತ್ತಿರುವ ಅವರು, ಹುಟ್ಟುಹಬ್ಬದ ಖುಷಿಯಲ್ಲಿ ವಿಜಯವಾಣಿಗೆ ಮಾತಿಗೆ ಸಿಕ್ಕಿದ್ದರು. ಸದ್ಯ ಯಾವ ಚಿತ್ರದಲ್ಲಿ ಬಿಜಿಯಾಗಿದ್ದಾರೆ? ಯಾವ ಸಿನಿಮಾ ಯಾವಾಗ ತೆರೆಗೆ ಬರಲಿದೆ? ಅಂತೆಲ್ಲ ಹಲವು ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದ್ದಾರೆ.

* ಎರಡು ವರ್ಷಗಳಿಂದ ನಿಮ್ಮ ಸಿನಿಮಾ ಬರಲಿಲ್ಲವಲ್ಲಾ?

- ವರ್ಷಕ್ಕೆ ಎರಡು ಅಥವಾ ಮೂರು ಸಿನಿಮಾ ಮಾಡಲೇಬೇಕು ಎಂಬುದು ನನ್ನಾಸೆ. ಆದರೆ, ಕೆಲವೊಮ್ಮೆ ಅದು ನಮ್ಮ ಕೈಯಲ್ಲಿ ಇರುವುದಿಲ್ಲ. ಪ್ರ್ಯಾಕ್ಟಿಕಲಿ ಅದು ಕಷ್ಟವಾಗುತ್ತದೆ. ಕೆಲ ಚಿತ್ರಗಳಿಗೆ ಬೃಹತ್​ ಸೆಟ್​ಗಳು ಬೇಕಾಗುತ್ತದೆ. ದೊಡ್ಡ ಬಜೆಟ್​ ಕೇಳುವ ಸಿನಿಮಾಗಳು ಹೆಚ್ಚು ಸಮಯವನ್ನೂ ಕೇಳುತ್ತವೆ. ಆಗ ನಾನು ಚಿತ್ರತಂಡದ ಮೇಲೆ ಒತ್ತಡ ಹಾಕಲು ಆಗುವುದಿಲ್ಲ. ಸದ್ಯ ನಾನು "ಬೃಂದಾ ವಿಹಾರಿ', "ಪಿನಾಕ', "ಯುವರ್ಸ್​ ಸಿನ್ಸಿಯರ್ಲಿ ರಾಮ್​', "ತಮ್ಮ ಸುಖಾಗಮನ ಬಯಸುವ', "ಜಾಂಗೋ ಕೃಷ್ಣಮೂರ್ತಿ'... ಹೀಗೆ ಐದು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ.
* ಈ ವರ್ಷ ಯಾವ ಸಿನಿಮಾ ರಿಲೀಸ್​ ಆಗಲಿವೆ?
& ಆಗಸ್ಟ್​ನಿಂದ ಡಿಸೆಂಬರ್​ ಒಳಗೆ ಒಂದು ಅಥವಾ ಎರಡು ತಿಂಗಳ ಅಂತರದಲ್ಲಿ "ಬೃಂದ ವಿಹಾರಿ' ಮತ್ತು "ಪಿನಾಕ' ಚಿತ್ರಗಳು ಬಿಡುಗಡೆಯಾಗಲಿವೆ. "ಪಿನಾಕ'ದಂತೆಯೇ "ಯುವರ್ಸ್​ ಸಿನ್ಸಿಯರ್ಲಿ ರಾಮ್​' ಚಿತ್ರದ ಬಜೆಟ್​ ಕೂಡ ದೊಡ್ಡದಾಯಿತು. ಹೀಗಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ನಾಯಕ ನಟನಾಗಿ ್ಲೆಕ್ಸಿಬಲ್​ ಆಗಿರಬೇಕು. ನಾನೇನೋ ಹಲವು ಕಥೆಗಳನ್ನು ಕೇಳಿದೆ. ಆದರೆ, ಈಗ ಇರುವ ಸಿನಿಮಾಗಳನ್ನು ಮೊದಲು ಒಂದೊಂದಾಗಿ ರಿಲೀಸ್​ ಮಾಡಿ, ನಂತರ ಹೊಸ ಸಿನಿಮಾ ಓಕೆ ಮಾಡಬೇಕು ಅಂತ ನಿರ್ಧರಿಸಿ, ಯಾವುದನ್ನೂ ಒಪ್ಪಿಲ್ಲ.

* ಐದೂ ಚಿತ್ರಗಳನ್ನು ಹೇಗೆ ಬ್ಯಾಲೆನ್ಸ್​ ಮಾಡುತ್ತಿದ್ದೀರಿ?

- ಐದು ಚಿತ್ರಗಳೂ ವಿಭಿನ್ನ ಜಾನರ್​ ಹೊಂದಿದ್ದು, ನನ್ನ ಪಾತ್ರ ಕೂಡ ಒಂದಕ್ಕಿಂತ ಒಂದು ಭಿನ್ನವಾಗಿದೆ. "ಪಿನಾಕ' ಹಿಸ್ಟಾರಿಕಲ್​, ಮಿಸ್ಟರಿ, ್ಯಾಂಟಸಿ ಜಾನರ್​ ಆಗಿದ್ದರೆ, "ಬೃಂದವಿಹಾರಿ' ಎಮೋಷನ್ಸ್​ ಮತ್ತು ಸಂಗೀತ ಹಿನ್ನೆಲೆ ಹೊಂದಿದೆ. "ಯುವರ್ಸ್​ ಸಿನ್ಸಿಯರ್ಲಿ ರಾಮ್​' ಜರ್ನಿ ಸುತ್ತ ಸಾಗುತ್ತದೆ. "ತಮ್ಮ ಸುಖಾಗಮನ ಬಯಸುವ' ನೀಟ್​ ಲವ್​ಸ್ಟೋರಿ ಕಮ್​ ಡ್ರಾಮಾ ಆಗಿದೆ. ಹೀಗಾಗಿ ಪ್ರತಿ ತಿಂಗಳು 20 ದಿನ ಒಂದು ಚಿತ್ರದ ಶೂಟಿಂಗ್​ ಮಾಡಿ, 10 ದಿನ ಬ್ರೇಕ್​ ಪಡೆದು ಮತ್ತೊಂದು ಪಾತ್ರಕ್ಕೆ ಸಿದ್ಧನಾಗುತ್ತಿದ್ದೆ. ಇದೇ ರೀತಿ ಎಲ್ಲ ಚಿತ್ರಗಳಲ್ಲೂ ನಟಿಸಲು ಸಾಧ್ಯವಾಯಿತು.

* ಈ ಬಾರಿಯ ಹುಟ್ಟುಹಬ್ಬ ಆಚರಣೆ ಹೇಗಿರಲಿದೆ? ರೆಸಾಲ್ಯೂಷನ್​ ಏನಾದರೂ...

- ಕಳೆದ ಐದು ವರ್ಷಗಳಿಂದ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಬಾರಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದೇನೆ. ವರ್ಷಕ್ಕೆರಡು ಸಿನಿಮಾ ಮಾಡಲೇಬೇಕು ಅನ್ನೋದೇ ನನ್ನ ರ್ಬತಡೇ ರೆಸಾಲ್ಯೂಷನ್​.

* "ಜಾಂಗೋ ಕೃಷ್ಣಮೂರ್ತಿ' ತಡವಾಗುತ್ತಿರುವುದೇಕೆ?

- ಅರಸು ಅಂತಾರೆ ನಿರ್ದೇಶನದ ಚಿತ್ರ "ಜಾಂಗೋ ಕೃಷ್ಣಮೂರ್ತಿ' ಒಂದು ಹಂತದ ಶೂಟಿಂಗ್​ ಮುಗಿದ ಬಳಿಕ ಬ್ರೇಕ್​ ತೆಗೆದುಕೊಂಡಿದ್ದೆವು. ಸ್ಥಗಿತಗೊಳ್ಳಲಿದೆ ಎಂಬ ರೂಮರ್​ ಕೂಡ ಹಬ್ಬಿತ್ತು. ಆದರೆ, ಇತ್ತೀಚೆಗಷ್ಟೆ ನಿರ್ದೇಶಕರು ಮತ್ತು ನಿರ್ಮಾಪಕರು ಬಂದು ಮಾತನಾಡಿದ್ದಾರೆ. ಹೀಗಾಗಿ ಟೇಕಾಫ್​ ಆಗಲಿದೆ.

* ಇವತ್ತಿನ ಕನ್ನಡ ಚಿತ್ರರಂಗದ ಸ್ಥಿತಿಯ ಬಗ್ಗೆ...

- ಕನ್ನಡ ಚಿತ್ರಗಳು ಓಡುತ್ತಿಲ್ಲ, ಒಳ್ಳೆ ಕಂಟೆಂಟ್​ ಬರುತ್ತಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಗ್ಯಾಪಲ್ಲಿ ಒಂದೊಳ್ಳೆ ಸಿನಿಮಾ ಥಿಯೇಟರ್​ಗಳಲ್ಲಿ ನಿಂತುಕೊಂಡುಬಿಟ್ಟರೆ ಅದು ಎಷ್ಟು ಬಿಜಿನೆಸ್​ ಮಾಡುತ್ತೋ ಊಹಿಸಲೂ ಸಾಧ್ಯವಿಲ್ಲ. ಅಷ್ಟು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿಬಿಡಬಹುದು. ಇವತ್ತು $15 ಕೋಟಿ, $20 ಕೋಟಿ ಕೇವಲ ಒಂದು ವಾರದ ಕಲೆಕ್ಷನ್​. ಏರಿಳಿತ ಆಗಿದೆ ನಿಜ. ಇನ್ನು ಆರು ತಿಂಗಳಲ್ಲಿ ಒಂದು ಕನ್ನಡ ಸಿನಿಮಾ ದೊಡ್ಡ ಹಿಟ್​ ಆಗಲಿದೆ. ಇವತ್ತು ಸಿನಿಮಾ ಗಳಿಕೆಯ ವಿಚಾರ ಗುಟ್ಟಾಗಿ ಉಳಿದಿಲ್ಲ. ಸಿನಿಮಾದಲ್ಲಿ ಆದಾಯ ಇದೆ. ಸರಿಯಾದ ಸಮಯದಲ್ಲಿ ಸರಿಯಾದ ಸಿನಿಮಾಗಳು ಬರುತ್ತಿಲ್ಲವಷ್ಟೇ. ಒಳ್ಳೆ ಟೈಮಲ್ಲಿ ಬಂದರೆ ಹೊಸಬರ ಚಿತ್ರಗಳೂ ಹಿಟ್​ ಆಗುತ್ತವೆ. ಹೊಸಬರ ಚಿತ್ರಗಳು ಚೆನ್ನಾಗಿ ಕಲೆಕ್ಷನ್​ ಮಾಡಿಕೊಂಡಷ್ಟೂ ಚಿತ್ರರಂಗಕ್ಕೆ ಒಳ್ಳೆಯದೇ. ಮೊದಲೆಲ್ಲ ಥಿಯೇಟರ್​ ಕಲೆಕ್ಷನ್​ ಮೇಲೆ ಅವಲಂಬಿಸಿದ್ದೆವು. ನಂತರ ಟಿವಿ, ಒಟಿಟಿ ಹಕ್ಕುಗಳಿಂದ ಆದಾಯ ಆರಂಭವಾದ ಬಳಿಕ ಬಜೆಟ್​ ಹಿಗ್ಗಿತು. ಈಗ ಟಿವಿ, ಒಟಿಟಿಯಿಂದ ಹಣ ಬರುತ್ತಿಲ್ಲವಾದರೂ, ಥಿಯೇಟರ್​ ಕಲೆಕ್ಷನ್​ ಹಿಗ್ಗಿದೆ. ತಿಂಗಳಿಗೆ ಎರಡು ಒಳ್ಳೆ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಬರುತ್ತಿದ್ದರೆ, ಜನ ಮತ್ತೆ ಥಿಯೇಟರ್​ಗೆ ಬಂದೇ ಬರುತ್ತಾರೆ.

* ನಟರ ಪ್ಯಾನ್​ ಇಂಡಿಯಾ ಮೋಹದಿಂದಾಗಿ ಸಿನಿಮಾಗಳು ತಡವಾಗುತ್ತಿವೆಯಾ?

- ಬೇರೆ ನಟರು ಬಹುಭಾಷೆ, ಪ್ಯಾನ್​ ಇಂಡಿಯಾ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರಾ ಇಲ್ಲವಾ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. "ಪಿನಾಕ' ಬಹುಭಾಷೆಗಳಲ್ಲಿ ಬರುತ್ತಿದ್ದರೂ, ನನ್ನ ಮೊದಲ ಆದ್ಯತೆ ಕನ್ನಡಕ್ಕೆ. ಯಾವ ಚಿತ್ರವಾದರೂ ಮೊದಲು ಕನ್ನಡದಲ್ಲಿ ರಿಲೀಸ್​ ಮಾಡಿ ನಂತರ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡಿ ಎಂದೇ ನಿರ್ಮಾಪಕರಿಗೂ ಹೇಳುತ್ತೇನೆ.