ನ್ಯೂಸ್

ಜನೋತ್ಸವವಾಗಿ ಸುವರ್ಣ ಸಂಭ್ರಮ ಸಮಾರೋಪ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಕ್ಕೆ ಕರ್ನಾಟಕವೆಂದು ಮರು ನಾಮಕರಣ ಮಾಡಿದ ಸುವರ್ಣ ವರ್ಷವಿದು. ಈ ವರ್ಷವಿಡೀ ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ. ನ.1ರಂದು ನಡೆಯುವ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭವನ್ನು ಜನೋತ್ಸವವಾಗಿ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದರು.

ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸುವರ್ಣ ಸಂಭ್ರಮ ಸಮಾರೋಪ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಕುರಿತು ಗುರುವಾರ ಕರೆದಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿಧಾನಸೌಧ ಮಹಾದ್ವಾರ ಮೆಟ್ಟಿಲು ಸಮಾರೋಪ ಕಾರ್ಯಕ್ರಮ ಆಯೋಜನೆ. ಅದೇ ದಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಹ ಮಾಡಲಾಗುವುದು ಎಂದು ತಿಳಿಸಿದರು.

ಸುವರ್ಣ ಮಹೋತ್ಸವ ನಿಮಿತ್ತ ಹಂಪಿಯಿಂದ ಈಗಾಗಲೇ ಶುರುವಾದ ಕನ್ನಡ ರಥಯಾತ್ರೆ 28 ಜಿಲ್ಲೆಗಳಲ್ಲಿ ಸಾಗಿದೆ. ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸಂಚರಿಸಿ ನಾಡು-ನುಡಿ, ಸಂಸ್ಕೃತಿ, ಚರಿತ್ರೆಯನ್ನು ಸಾರುತ್ತಿದ್ದು, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ರಥಯಾತ್ರೆಯ ಸಮಾರೋಪ ಕಾರ್ಯಕ್ರಮ ನಡೆಯಲಿದೆ.

ನಾಮಕರಣದ ಸುವರ್ಣ ಮಹೋತ್ಸವ ನಿಮಿತ್ತ ನಾಲ್ಕು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಮೈಸೂರಿನಲ್ಲಿ ಚಿಂತನಾ ಗೋಷ್ಠಿ, ರಾಯಚೂರಿನಲ್ಲಿ ಗೋಕಾಕ್ ಚಳವಳಿ ಸಂಸ್ಮರಣೆ, ಮಹಾರಾಷ್ಟ್ರದ ಜತ್ ತಾಲೂಕಿನಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ ಮತ್ತು ಮಂಗಳೂರಿನಲ್ಲಿ ಬಹುಸಂಸ್ಕೃತಿ ಉತ್ಸವ ಏರ್ಪಡಿಸಲಾಗುತ್ತಿದೆ.

ಕನ್ನಡ ಜನ ಚಳವಳಿ, ಕನ್ನಡತನದ ವಿಸ್ತಾರ, ಅರಿವು, ಹೋರಾಟದ ಹಾದಿಯಲ್ಲಿ ರೂಪಗೊಂಡ ಕನ್ನಡ ಚರಿತ್ರೆಯನ್ನು ಈಗಿನ ಯುವಜನ ಸಮೂಹಕ್ಕೆ ತಲುಪಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಕನ್ನಡ ಭಾಷೆ, ಸಂಸ್ಕೃತಿ, ಸಂಗೀತ, ಸಾಹಿತ್ಯ, ಜನಪದ, ಚರಿತ್ರೆ ಸೇರಿ ಎಲ್ಲದರ ಮಹತ್ವ ಸಾರಲು ಸಿದ್ಧತೆಳಾಗುಗುತ್ತಿವೆ. ಸಮಾರೋಪ ಸಮಾರಂಭದ ದಿನ ಮನೆ ಮನೆಯಲ್ಲಿ ಕನ್ನಡ ಬಾವುಟ ಹಾರಿಸಲು ನಾಡಿನ ಜನರಿಗೆ ಮನವಿ ಮಾಡಲಾಗುವುದು ಎಂದರು.

ನ.1ರಂದೇ ಪುತ್ಥಳಿ ಅನಾವರಣ

ವಿಧಾನಸೌಧ ಆವರಣದಲ್ಲಿ ನಾಡದೇವಿ ಭುವನೇಶ್ವರಿಯ 25 ಅಡಿ ಎತ್ತರದ ಕಂಚಿನ ಪ್ರತಿಮೆ ಕಾಮಗಾರಿ ಪ್ರಗತಿಯಲ್ಲಿದೆ. ನ.1ರಂದೇ ಅನಾವರಣಗೊಳ್ಳಲಿದೆ. ಬಳ್ಳಾರಿಯಲ್ಲಿ ರಂಜಾನ್‌ಸಾಬ್ ಸ್ಮಾರಕ, ಧಾರವಾಡದಲ್ಲಿ ಅದರಗುಂಚಿ ಶಂಕರಗೌಡ, ಗದಗದಲ್ಲಿ ಅಂದಾನಪ್ಪ ದೊಡ್ಡಮೇಟಿ ಸ್ಮಾರಕ ನಿರ್ಮಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ 50 ಸಾಧಕಿಯರ ಕುರಿತು 100 ಪುಟಗಳ 50 ಕೃತಿಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಮುದ್ರಿಸಲಿದೆ.

ಕರ್ನಾಟಕದ ಬಹುಸಂಸ್ಕೃತಿ, ಸೌಹಾರ್ದ ಸಂಸ್ಕೃತಿ, ಕುರಿತು 100 ಪುಸ್ತಕಗಳನ್ನು ಸಿದ್ಧಪಡಿಸುತ್ತಿದ್ದು, ಡಿಸೆಂಬರ್ ವೇಳೆಗೆ ಬಿಡುಗಡೆಯಾಗಲಿದೆ. ನಾಡಿನ ಕಲೆ, ಸಾಹಿತ್ಯ, ಕೃಷಿ, ತೋಟಗಾರಿಕೆ, ಕೈಗಾರಿಕೆ ಕುರಿತಾದ ಐದು ಸಂಪುಟಗಳು, ಸ್ಮರಣ ಸಂಭ್ರಮ ಸಂಪುಟ ಹೊರತರಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

69 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ

ಈ ಬಾರಿ 69 ಜನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು. ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿಗೆ ಆಯ್ಕೆ ಸಮಿತಿ ರಚಿಸಲಾಗಿದೆ. ಅಲ್ಲದೆ, ರಾಜ್ಯೋತ್ಸವ ಪ್ರಶಸ್ತಿಗೆ ಆನ್‌ಲೈನ್ ಮುಖೇನ ಅರ್ಜಿ ಸಲ್ಲಿಸಲು ಸೆ.30ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಶಿವರಾಜ್ ತಂಗಡಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಅಕಾಡೆಮಿಗಳ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಇದ್ದರು.