ನ್ಯೂಸ್

ಚಿನ್ನ ಕಳ್ಳಸಾಗಣೆ, ಇಬ್ಬರು ಮಹಿಳೆ ಸೇರಿ ಮೂವರ ಬಂಧನ

ಬೆಂಗಳೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಮಹಿಳೆ ಸೇರಿ ಮೂವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.


ಬಂಧಿತ ಮೂವರು ಪ್ರಯಾಣಿಕರಿಂದ ಒಟ್ಟು ೬೭.೫೭ ಲಕ್ಷ ರೂ., ಮೌಲ್ಯದ ೧ ಕೆ.ಜಿ.೧೩೩ ಗ್ರಾಂ ತೂಕದ ಚಿನ್ನ ಹಾಗೂ ೧.೪೯ ಸಾವಿರ ರೂ. ಮೌಲ್ಯದ ಐಫೋನ್ ವಶಪಡಿಸಿಕೊಳ್ಳಲಾಗಿದೆ.


ಕೌಲಾಲಂಪುರದಿಂದ ಎಕೆ-೦೫೩ ಸಂಖ್ಯೆ ವಿಮಾನದಲ್ಲಿ ಬಂದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುವ ವೇಳೆ ಭಾರತ ಮೂಲದ ಮಹಿಳಾ ಪ್ರಯಾಣಿಕರೊಬ್ಬರು ಧರಿಸಿದ್ದ ಬ್ಲೌಸ್‌ನೊಳಗೆ ೩೦೦ ಗ್ರಾಂ ತೂಕದ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಇದೇ ವಿಮಾನದಲ್ಲಿ ಬಂದಿದ್ದ ಮಲೇಷಿಯಾ ಮೂಲದ ಮಹಿಳೆ ಗುದನಾಳದಲ್ಲಿ ೫೭೮ ಗ್ರಾಂ ತೂಕದ ಚಿನ್ನ ಬಚ್ಚಿಟ್ಟುಕೊಂಡು ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.


ಅಂತೆಯೆ ಕುವೈತ್‌ನಿಂದ ಗಲ್ಫ್ ಏರ್‌ಫ್ಲೈಟ್ ಜಿಎಫ್-೨೮೨ ಸಂಖ್ಯೆಯ ವಿಮಾನದಲ್ಲಿ ಕೆಐಎಗೆ ಬಂದ ಭಾರತ ಮೂಲದ ಪುರುಷನೊಬ್ಬ ಡ್ರೈ ಫ್ರೂಟ್ಸ್‌ನೊಳಗೆ ೨೫೪ ಗ್ರಾಂ ತೂಕದ ಚಿನ್ನದ ತುಂಡುಗಳನ್ನು ಇಟ್ಟು ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ೧.೪೯ ಲಕ್ಷ ರೂ. ಮೌಲ್ಯದ ಐಫೋನ್ ಕಳ್ಳಸಾಗಣೆ ಮಾಡುತ್ತಿರುವುದು ಕಂಡು ಬಂದಿದೆ. ಈ ಮೂರು ಪ್ರಕರಣಗಳಲ್ಲಿ ಮೂವರು ಪ್ರಯಾಣಿಕರನ್ನು ಬಂಧಿಸಿ, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.