ನ್ಯೂಸ್

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಷೇರುಪೇಟೆ, ಚಿನ್ನ

ಮುಂಬೈ: ಭಾರತೀಯ ಷೇರು ಸೂಚ್ಯಂಕಗಳು ಸೋಮವಾರ ಶೇ. 2ಕ್ಕಿಂತ ಹೆಚ್ಚು ಏರಿಕೆ ಕಂಡು ಹೊಸ ದಾಖಲೆ ಬರೆದಿದೆ. 3 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಸಾಧಿಸಿರುವುದು ಹೂಡಿಕೆದಾರರ ಉತ್ಸಾಹವನ್ನು ಹೆಚ್ಚಿಸಿದೆ.

ಸೆನ್ಸೆಕ್ಸ್ 1,383.93 ಪಾಯಿಂಟ್ ಜಿಗಿದು 68,865.12ನಲ್ಲಿ ಕೊನೆಗೊಂಡಿದೆ. ಇಂಟ್ರಾ-ಡೇ ವಹಿವಾಟಿನಲ್ಲಿ ಗರಿಷ್ಠ 68,918.22 ಅಂಕ ಮುಟ್ಟಿ ತ್ತು. ಕಳೆದ ವರ್ಷ ಮೇ 20ರ ನಂತರ ಇದು ಏಕದಿನದ ಅತಿದೊಡ್ಡ ಏರಿಕೆ ಆಗಿದೆ. ನಿಫ್ಟಿ ಕೂಡ 418.90 ಪಾಯಿಂಟ್ ಏರಿಕೆ ಕಂಡು, 20,686.80 ಅಂಕ ತಲುಪಿದೆ. ಇದು ಭಾರತದ ಷೇರುಮಾರುಕಟ್ಟೆಯಲ್ಲಿನ ಸಾರ್ವ ಕಾಲಿಕ ಗರಿಷ್ಠ ಮಟ್ಟವಾಗಿದೆ. ಬಿಎಸ್​ಇನಲ್ಲಿ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ 5.81 ಲಕ್ಷ ಕೋಟಿ ರೂ. ಏರಿಕೆ ಕಂಡು, 343.48 ಲಕ್ಷ ಕೋಟಿ ರೂ.ಗೆ ತಲುಪಿದೆ.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢ ಚುನಾವಣೆಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿರುವುದು, ಆರ್ಥಿಕ ವರದಿಗಳು, ವಿದೇಶಿ ನಿಧಿಯ ಒಳಹರಿವಿನ ಕಾರಣ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಭಾವನೆ ಮೂಡಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 80 ಡಾಲರ್​ಗಿಂತ ಕಡಿಮೆ ಆಗಿದೆ.

ಸೆನ್ಸೆಕ್ಸ್​ನಲ್ಲಿ ಐಸಿಐಸಿಐ ಬ್ಯಾಂಕ್, ಎಸ್​ಬಿಐ ಗರಿಷ್ಠ ಲಾಭ ಕಂಡವು. ಲಾರ್ಸೆನ್ ಮತ್ತು ಟೂಬ್ರೊ, ಕೋಟಕ್ ಮಹೀಂದ್ರಾ ಬ್ಯಾಂಕ್, ಚ್​ಡಿಎಫ್​ಸಿ ಬ್ಯಾಂಕ್ ಇನ್ನಿತರ ಷೇರುಗಳು ಲಾಭ ಗಳಿಸಿವೆ. ಮತ್ತೊಂದೆಡೆ, ವಿಪ್ರೋ, ಟಾಟಾ ಮೋಟಾರ್ಸ್ ತುಸು ಇಳಿಕೆ ಕಂಡಿವೆ. ಬಹುತೇಕ ಎಲ್ಲ ವಲಯದ ಸೂಚ್ಯಂಕಗಳಲ್ಲಿ ಏರಿಕೆ ಕಂಡುಬಂದಿದೆ. ತೈಲ ಮತ್ತು ಅನಿಲ ಶೇ. 3.77, ಬ್ಯಾಂಕ್ ಇಂಡೆಕ್ಸ್ ಶೇ. 3.56, ವಿದ್ಯುತ್ ವಲಯದ ಸೂಚ್ಯಂಕ ಶೇ. 2.99, ಹಣಕಾಸು ಸೇವೆಗಳು ಶೇ. 2.98ರಷ್ಟು ಏರಿಕೆ ಕಂಡಿದೆ.

ಚಿನ್ನದ ಬೆಲೆಯೂ ದಾಖಲೆ

ಸೋಮವಾರ ಪ್ರತಿ 10 ಗ್ರಾಂ ಚಿನ್ನದ ಬೆಲೆ 450 ರೂಪಾಯಿ ಏರಿಕೆಯಾಗಿದ್ದು, 64,300 ರೂ. ಮಟ್ಟ ತಲುಪಿದೆ. ಇದು ಈವರೆಗಿನ ಸಾರ್ವಕಾಲಿಕ ಏರಿಕೆ ಆಗಿದೆ. ಬೆಳ್ಳಿ ಪ್ರತಿ ಕಿಲೋಗೆ 80,200 ರೂ. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರವೃತ್ತಿ ಹಿನ್ನೆಲೆಯಲ್ಲಿ ಈ ಏರಿಕೆ ಕಂಡುಬಂದಿದೆ.

ಅದಾನಿ ಷೇರು ಭರ್ಜರಿ ಏರಿಕೆ

ಅದಾನಿ ಸಮೂಹದ ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅದಾನಿ ಸಮೂಹದ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು 12 ಲಕ್ಷ ಕೋಟಿ ರೂಪಾಯಿಗಳ ಗಡಿ ತಲುಪಿದೆ. ಅದಾನಿ ಗ್ರೀನ್ ಎನರ್ಜಿ ಶೇ. 9.43, ಅಂಬುಜಾ ಸಿಮೆಂಟ್ ಶೇ. 7.32, ಅದಾನಿ ಎಂಟರ್​ಪ್ರೖೆಸಸ್ ಶೇ. 7, ಎಸಿಸಿ ಶೇ. 5, ಅದಾನಿ ಪೋರ್ಟ್ಸ್ ಶೇ. 6.19, ಅದಾನಿ ಪವರ್ ಶೇ. 5.54, ಅದಾನಿ ಎನರ್ಜಿ ಸಲ್ಯೂಷನ್ಸ್ ಶೇ. 5.40 ಏರಿಕೆ ದಾಖಲಿಸಿದೆ.