ನವದೆಹಲಿ: ಆಭರಣ ವ್ಯಾಪಾರಿಗಳು ಮತ್ತು ದಾಸ್ತಾನುದಾರರಿಂದ ನಿರಂತರ ಮಾರಾಟದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ 160 ರೂ. ಕಡಿಮೆಯಾಗಿದೆ.
ಶುಕ್ರವಾರ 10 ಗ್ರಾಂಗೆ 99,960 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಸೋಮವಾರ 99,800 ರೂ.ಗೆ ಇಳಿಯಿತು. 99,250 ರೂ. ಇದ್ದ ಶೇ. 99.5ರಷ್ಟು ಶುದ್ಧತೆಯ ಚಿನ್ನ 150 ರೂ. ಕಡಿಮೆಯಾಗಿ 99,100 ರೂ.ಗೆ ಇಳಿಯಿತು. ಬೆಳ್ಳಿಯ ಬೆಲೆ ಸೋಮವಾರ ಕೆಜಿಗೆ 1,05,200 ರೂ. ಇತ್ತು ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.
ಇರಾನ್ನ ಮೂರು ಪ್ರಮುಖ ಪರಮಾಣು ಸ್ಥಳಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡ ಉದ್ವಿಗ್ನತೆಯಿಂದಾಗಿ ಸೋಮವಾರ ಭಾರತೀಯ ಷೇರುಪೇಟೆ ಕುಸಿದಿದೆ. ಮಾಹಿತಿ ತಂತ್ರಜ್ಞಾನ, ವಾಹನೋದ್ಯಮ ಷೇರುಗಳ ಮೇಲಿನ ಮಾರಾಟದ ಒತ್ತಡ ಮತ್ತು ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯೂ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ದಿನದ ವಹಿವಾಟಿನ ಮಧ್ಯೆ 930ಕ್ಕೂ ಹೆಚ್ಚು ಅಂಕ ಕುಸಿದಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 511.38 ಅಂಕ ಇಳಿಕೆಯೊಂದಿಗೆ 81,896.79ಕ್ಕೆ ಸ್ಥಿರವಾಯಿತು. ನಿಫ್ಟಿ 140 ಅಂಕ ಇಳಿಕೆಯಾಗಿ 24,971.90ಕ್ಕೆ ಸ್ಥಿರಗೊಂಡಿತು.