ನವದೆಹಲಿ: ಹಬ್ಬಗಳ ಋತು ಆರಂಭವಾಗುವ ಮುನ್ನವೇ ಚಿನ್ನ ಮತ್ತು ಬೆಳ್ಳಿಯ ದರಗಳು ಏರುಮುಖವಾಗಿವೆ. ರಾಜಧಾನಿಯ ಚಿನಿವಾರ ಪೇಟೆಯಲ್ಲಿ ಮಂಗಳವಾರವೂ ಚಿನ್ನ, ಬೆಳ್ಳಿ ದರ ಜಿಗಿತ ಕಂಡಿದ್ದು, ಚಿನ್ನ ಮತ್ತೆ 1 ಲಕ್ಷ ರೂಪಾಯಿಗಳ ಗಡಿ ದಾಟಿದೆ.
ಶುದ್ಧ ಚಿನ್ನದ ದರ 1 ಸಾವಿರ ರೂ. ಏರಿಕೆಯಾಗಿದ್ದು, 1,00,020 ರೂ.ಗೆ ತಲುಪಿದೆ. ಸೋಮವಾರ 10 ಗ್ರಾಂ ಚಿನ್ನದ ದರ 99,020 ರೂ. ಇತ್ತು. ಇದೇ ರೀತಿ ಆಭರಣ ಚಿನ್ನದ ದರ 1 ಸಾವಿರ ರೂ. ಏರಿಕೆಯಾಗಿ, 10 ಗ್ರಾಂಗೆ 99,550 ರೂ. ಆಗಿದೆ. ಸೋಮವಾರ 10 ಗ್ರಾಂಗೆ 98,550 ರೂ. ಇತ್ತು. ಬೆಳ್ಳಿ ಬೆಲೆಯೂ ಏಕಾಏಕಿ 3 ಸಾವಿರ ರೂ. ಏರಿಕೆಯಾಗಿದೆ. ಕೆ.ಜಿ.ಗೆ 1,14,000 ರೂ. ತಲುಪಿದೆ. ಸೋಮವಾರ ಬೆಳ್ಳಿಯ ಬೆಲೆ ಕೆ.ಜಿಗೆ 1,11,000 ರೂ. ಇತ್ತು ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.