ಒಡವೆ ಧರಿಸಿದಾಗ ಚರ್ಮ ಕಪ್ಪಾಗುವುದು 
ನ್ಯೂಸ್

Gold jewelry: ಒಡವೆ ಹಾಕಿಕೊಂಡ್ರೆ ಚರ್ಮ ಕಪ್ಪಾಗುತ್ತಾ? ನಿಮ್ಮ ದೇಹದ ಈ ಗುಣಗಳೇ ಕಾರಣ ಇರಬಹುದು!

Dark spot skin: ಒಂದೇ ಒಡವೆಯನ್ನು ಕೆಲವರು ಧರಿಸಿದರೆ ಏನೂ ಆಗಲ್ಲ, ಇನ್ನು ಕೆಲವರು ಹಾಕಿಕೊಂಡರೆ ಚರ್ಮದ ಮೇಲೆ ಕಪ್ಪು ಕಲೆ ಕಾಣಿಸಿಕೊಳ್ಳುತ್ತೆ. ಇದನ್ನು ನೋಡಿ ಒಡವೆ ನಕಲಿ ಇರಬೇಕು ಅಥವಾ ಚಿನ್ನ(Gold jewelry), ಬೆಳ್ಳಿಯ ಗುಣಮಟ್ಟ ಸರಿಯಿಲ್ಲ ಎಂದು ಹಲವರು ಅಂದುಕೊಳ್ಳುತ್ತಾರೆ. ಆದ್ರೆ ಇದಕ್ಕೆ ಒಡವೆಯ ಗುಣಮಟ್ಟವೊಂದೇ ಕಾರಣವಲ್ಲ. ವ್ಯಕ್ತಿಯ ಚರ್ಮದ ಸ್ವಭಾವ, ಬೆವರಿನಲ್ಲಿರುವ ರಾಸಾಯನಿಕ ಅಂಶಗಳು ಮತ್ತು ಒಡವೆಯಲ್ಲಿ ಬೆರೆಸಿರುವ ಇತರ ಲೋಹಗಳೂ ಇದಕ್ಕೆ ಕಾರಣವಾಗಬಹುದು.

ಹೌದು, ಒಂದೇ ರೀತಿಯ ಒಡವೆ ಎಲ್ಲರ ಮೈಮೇಲೂ ಒಂದೇ ರೀತಿ ವರ್ತಿಸಲ್ಲ. ಇದಕ್ಕೆ ಕೆಲವು ವೈಜ್ಞಾನಿಕ ಕಾರಣಗಳಿವೆ. ಹಾಗಾದ್ರೆ ಒಡವೆ ಧರಿಸಿದಾಗ ಚರ್ಮ ಯಾಕೆ ಕಪ್ಪಾಗುತ್ತೆ? ಇದನ್ನು ತಡೆಯೋದು ಹೇಗೆ? ಇಲ್ಲಿದೆ ಮಾಹಿತಿ.

1. ಬೆವರು ಮತ್ತು ಚರ್ಮದ ಸ್ವಭಾವ

ಪ್ರತಿಯೊಬ್ಬರ ಚರ್ಮದ ಸ್ವಭಾವ ಒಂದೇ ರೀತಿ ಇರಲ್ಲ. ಕೆಲವರ ಬೆವರಿನಲ್ಲಿ ಉಪ್ಪಿನಂಶ, ಆಮ್ಲೀಯ ಅಂಶ ಮತ್ತು ಇತರ ರಾಸಾಯನಿಕಗಳ ಪ್ರಮಾಣ ಹೆಚ್ಚಿರಬಹುದು. ಇವು ಒಡವೆಯಲ್ಲಿರುವ ಲೋಹಗಳ ಜೊತೆ ಸಂಪರ್ಕಕ್ಕೆ ಬಂದಾಗ ರಾಸಾಯನಿಕ ಕ್ರಿಯೆ ನಡೆದು ಒಡವೆ ಮಂಕಾಗಬಹುದು. ಕೆಲವೊಮ್ಮೆ ಚರ್ಮದ ಮೇಲೂ ಕಪ್ಪು ಅಥವಾ ಹಸಿರು ಬಣ್ಣದ ಕಲೆ ಕಾಣಿಸಿಕೊಳ್ಳಬಹುದು.

ಇನ್ನು ಆಹಾರ, ಔಷಧಗಳು, ಹಾರ್ಮೋನ್ ಬದಲಾವಣೆಗಳು ಮತ್ತು ಸುತ್ತಮುತ್ತಲಿನ ವಾತಾವರಣವೂ ಬೆವರಿನ ಸಂಯೋಜನೆ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಒಬ್ಬರಿಗೆ ಒಡವೆ ಧರಿಸಿದಾಗ ಕಲೆ ಕಾಣಿಸಿಕೊಂಡರೆ, ಅದೇ ಒಡವೆ ಮತ್ತೊಬ್ಬರಿಗೆ ಯಾವುದೇ ತೊಂದರೆ ಕೊಡದೇ ಇರಬಹುದು.

2. ಬೆಳ್ಳಿಯ ಒಡವೆ ಯಾಕೆ ಕಪ್ಪಾಗುತ್ತೆ?

ಬೆಳ್ಳಿಯ ಒಡವೆಗಳು ಕಪ್ಪಾಗುವುದಕ್ಕೆ ಪ್ರಮುಖ ಕಾರಣ ಗಾಳಿಯಲ್ಲಿರುವ ಗಂಧಕದ ಅಂಶಗಳು. ಬೆಳ್ಳಿ ಗಂಧಕದ ಸಂಯುಕ್ತಗಳ ಜೊತೆ ಪ್ರತಿಕ್ರಿಯಿಸಿದಾಗ ಅದರ ಮೇಲ್ಮೈಯಲ್ಲಿ ಕಪ್ಪು ಬಣ್ಣದ ಸಿಲ್ವರ್ ಸಲ್ಫೈಡ್ ಪದರ ಉಂಟಾಗುತ್ತದೆ. ಸಾಮಾನ್ಯವಾಗಿ ಆಭರಣಗಳ ತಯಾರಿಕೆಗೆ ಬಳಸುವ 92.5% ಬೆಳ್ಳಿಗೆ 7.5% ತಾಮ್ರವನ್ನು ಬೆರೆಸಲಾಗುತ್ತದೆ. ಈ ತಾಮ್ರ ಕೂಡ ತೇವಾಂಶ ಮತ್ತು ಬೆವರಿನ ಸಂಪರ್ಕದಿಂದ ಬಣ್ಣ ಬದಲಾಯಿಸಬಹುದು. ಹೀಗಾಗಿ ಬೆಳ್ಳಿಯ ಒಡವೆ ಕಪ್ಪಾಗಿದೆ ಎಂದ ಮಾತ್ರಕ್ಕೆ ಅದು ನಕಲಿ ಅಂತ ತೀರ್ಮಾನಿಸಬೇಕಿಲ್ಲ.

3. ಚಿನ್ನದ ಒಡವೆ ಕೂಡ ಕಪ್ಪಾಗುತ್ತಾ?

ಚಿನ್ನ ಸಾಮಾನ್ಯವಾಗಿ ಸುಲಭವಾಗಿ ರಾಸಾಯನಿಕ ಕ್ರಿಯೆಗೆ ಒಳಗಾಗುವ ಲೋಹವಲ್ಲ. ಆದ್ರೆ ಆಭರಣಗಳ ತಯಾರಿಕೆಗೆ ಬಳಸುವ 22, 18 ಮತ್ತು 14 ಕ್ಯಾರೆಟ್ ಚಿನ್ನದಲ್ಲಿ ಇತರ ಲೋಹಗಳನ್ನು ಬೆರೆಸಲಾಗಿರುತ್ತದೆ.

24 ಕ್ಯಾರೆಟ್ ಚಿನ್ನಕ್ಕೆ ಹೋಲಿಸಿದರೆ ಕಡಿಮೆ ಕ್ಯಾರೆಟ್ ಚಿನ್ನದಲ್ಲಿ ಬೆಳ್ಳಿ, ತಾಮ್ರ ಸೇರಿದಂತೆ ಇತರ ಲೋಹಗಳ ಪ್ರಮಾಣ ಹೆಚ್ಚಿರುತ್ತದೆ. ಈ ಲೋಹಗಳು ಬೆವರು, ತೇವಾಂಶ ಮತ್ತು ಸೌಂದರ್ಯವರ್ಧಕಗಳ ಸಂಪರ್ಕಕ್ಕೆ ಬಂದಾಗ ಬಣ್ಣ ಬದಲಾಗಬಹುದು.

ಆದರೆ ಚಿನ್ನದ ಒಡವೆ ಕಪ್ಪಾಗುವುದಕ್ಕೆ ಕ್ಯಾರೆಟ್ ಪ್ರಮಾಣವೊಂದೇ ಕಾರಣವಲ್ಲ. ಒಡವೆಯಲ್ಲಿರುವ ಲೋಹಗಳ ಸಂಯೋಜನೆ ಮತ್ತು ಬಳಸುವ ಪರಿಸರವೂ ಮುಖ್ಯವಾಗುತ್ತವೆ.

4. ಪರ್ಫ್ಯೂಮ್, ಕ್ರೀಮ್ ಕೂಡ ಕಾರಣವಾಗಬಹುದು

ನಾವು ಪ್ರತಿದಿನ ಬಳಸುವ ಪರ್ಫ್ಯೂಮ್, ಲೋಷನ್, ಸನ್‌ಸ್ಕ್ರೀನ್ ಮತ್ತು ಮೇಕಪ್ ಉತ್ಪನ್ನಗಳಲ್ಲಿರುವ ಕೆಲವು ರಾಸಾಯನಿಕಗಳು ಒಡವೆಯ ಮೇಲ್ಮೈ ಜೊತೆ ಪ್ರತಿಕ್ರಿಯಿಸಬಹುದು.

ಇದರಿಂದ ಒಡವೆಯ ಹೊಳಪು ಕಡಿಮೆಯಾಗಬಹುದು ಅಥವಾ ಚರ್ಮದ ಮೇಲೆ ಕಪ್ಪು ಕಲೆ ಕಾಣಿಸಿಕೊಳ್ಳಬಹುದು. ಇನ್ನು ಹೆಚ್ಚು ಬೆವರುವಿಕೆ, ತೇವಾಂಶ ಮತ್ತು ಕರಾವಳಿ ಪ್ರದೇಶಗಳಲ್ಲಿನ ಆರ್ದ್ರ ವಾತಾವರಣ ಕೂಡ ಒಡವೆಗಳು ಬೇಗ ಮಂಕಾಗಲು ಕಾರಣವಾಗಬಹುದು.

ಒಡವೆಗಳಿಂದ ಚರ್ಮ ಕಪ್ಪಾಗದಂತೆ ತಡೆಯುವುದು ಹೇಗೆ?

ಒಡವೆಗಳನ್ನು ಸರಿಯಾಗಿ ಬಳಸಿದರೆ ಅವುಗಳ ಹೊಳಪನ್ನು ಕಾಪಾಡಿಕೊಳ್ಳಬಹುದು. ಜೊತೆಗೆ ಚರ್ಮದ ಮೇಲೆ ಕಪ್ಪು ಕಲೆ ಬೀಳುವ ಸಾಧ್ಯತೆಯನ್ನೂ ಕಡಿಮೆ ಮಾಡಬಹುದು.

  • ಮೊದಲು ಕ್ರೀಮ್ ಹಚ್ಚಿ: ಪರ್ಫ್ಯೂಮ್, ಲೋಷನ್ ಮತ್ತು ಸನ್‌ಸ್ಕ್ರೀನ್ ಹಚ್ಚಿದ ತಕ್ಷಣ ಒಡವೆ ಧರಿಸಬೇಡಿ. ಅವು ಚರ್ಮದ ಮೇಲೆ ಒಣಗಿದ ಬಳಿಕ ಒಡವೆ ಹಾಕಿಕೊಳ್ಳಿ.

  • ಬೆವರು ಒರೆಸಿಕೊಳ್ಳಿ: ಬೆವರು ಹೆಚ್ಚಾದಾಗ ಒಡವೆ ತೆಗೆದು ಮೃದುವಾದ ಬಟ್ಟೆಯಿಂದ ಒರೆಸಿಕೊಳ್ಳಿ.

  • ಸ್ವಚ್ಛವಾಗಿಡಿ: ಒಡವೆಯ ಸ್ವಭಾವಕ್ಕೆ ಸೂಕ್ತವಾದ ವಿಧಾನದಲ್ಲಿ ಮೃದುವಾಗಿ ಸ್ವಚ್ಛಗೊಳಿಸಿ. ಬಳಿಕ ಸಂಪೂರ್ಣ ಒಣಗಿಸಿ.

  • ಸರಿಯಾಗಿ ಸಂಗ್ರಹಿಸಿ: ಬೆಳ್ಳಿಯ ಒಡವೆಗಳನ್ನು ಬಳಸದಿದ್ದಾಗ ಗಾಳಿಯಾಡದ ಡಬ್ಬಿ ಅಥವಾ ಜಿಪ್‌ಲಾಕ್ ಚೀಲದಲ್ಲಿ ಇಡಿ.

  • ತೇವಾಂಶದಿಂದ ದೂರವಿಡಿ: ಸ್ನಾನ ಮಾಡುವಾಗ, ಈಜುವಾಗ ಮತ್ತು ರಾಸಾಯನಿಕ ವಸ್ತುಗಳನ್ನು ಬಳಸುವಾಗ ಒಡವೆಗಳನ್ನು ತೆಗೆದಿಡುವುದು ಒಳ್ಳೆಯದು.

ಒಟ್ಟಿನಲ್ಲಿ, ಒಡವೆ ಧರಿಸಿದಾಗ ಚರ್ಮ ಕಪ್ಪಾಗಲು ಒಡವೆಯ ಗುಣಮಟ್ಟವಷ್ಟೇ ಅಲ್ಲದೆ, ಚರ್ಮದ ಸ್ವಭಾವ, ಬೆವರು, ಮಿಶ್ರಲೋಹಗಳು ಮತ್ತು ಸೌಂದರ್ಯವರ್ಧಕಗಳೂ ಕಾರಣವಾಗಬಹುದು. ಚರ್ಮದಲ್ಲಿ ತುರಿಕೆ, ಕೆಂಪಾಗುವಿಕೆ ಅಥವಾ ಉರಿಯೂತ ಕಾಣಿಸಿಕೊಂಡರೆ ಆ ಒಡವೆ ಧರಿಸುವುದನ್ನು ನಿಲ್ಲಿಸಿ ವೈದ್ಯರ ಸಲಹೆ ಪಡೆಯುವುದು ಉತ್ತಮ.