ಕಣ್ಣೂರು: ಸಿನಿಮೀಯ ಶೈಲಿಯ ರೈಲು ದರೋಡೆ ಪ್ರಕರಣ ಕೇರಳದಲ್ಲಿ ನಡೆದಿದ್ದು, ಎರಡು ಎಕ್ಸ್ಪ್ರೆಸ್ ರೈಲುಗಳಲ್ಲಿ ಭಾರಿ ಪ್ರಮಾಣದ ಚಿನ್ನಾಭರಣ ದರೋಡೆಯಾಗಿರುವ ಘಟನೆ ಶನಿವಾರ ವರದಿಯಾಗಿದೆ. ಎರಡೂ ದರೋಡೆ ಪ್ರಕರಣಗಳು ಕೇರಳದ ವ್ಯಾಪ್ತಿಯಲ್ಲೇ ಆಗಿದ್ದು, ರೈಲು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ.
ತಿರೂರು ಮತ್ತು ವಡಕರ-ಮಾಹೆ ನಡುವೆ ಈ ದರೋಡೆಗಳು ನಡೆದಿರಬಹುದು ಎಂದು ನಂಬಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎರಡೂ ರೈಲುಗಳು ಮಂಗಳೂರು ಕಡೆಗೆ ಸಂಚರಿಸುತ್ತಿದ್ದವು. ಎರಡೂ ದರೋಡೆಗಳನ್ನೂ ಒಂದೇ ಗ್ಯಾಂಗ್ ಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಚೆನ್ನೈ-ಮಂಗಳೂರು ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಮಲಬಾರ್ ಎಕ್ಸ್ಪ್ರೆಸ್ ರೈಲುಗಳಲ್ಲಿ ದರೋಡೆ ನಡೆದಿರುವಂಥದ್ದು. ಚೆನ್ನೈ-ಮಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ನಿವಾಸಿ ಪೊನ್ನಿಮಾರಾನ್ ಬಳಿ ಇದ್ದ 15 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಮತ್ತು ತಿರುವನಂತಪುರ-ಮಂಗಳೂರು ಮಲಬಾರ್ ಎಕ್ಸ್ಪ್ರೆಸ್ನಲ್ಲಿ ಸಂಚರಿಸುತ್ತಿದ್ದ ಸಿಂಗಾಪುರದಿಂದ ಹಿಂದಿರುಗಿದ ಕಾಌಂಗಾಡ್ ನಿವಾಸಿಗಳ ಬಳಿ ಇದ್ದ 9.5 ಸವರಿನ್ ಚಿನ್ನಾಭರಣ ದೋಚಲ್ಪಟ್ಟಿವೆ.
ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಕೋಳಿಕ್ಕೋಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಚಿನ್ನಾಭರಣ ಕಳೆದುಕೊಂಡವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಪ್ರಾಥಮಿಕ ಮಾಹಿತಿಗಳನ್ನು ಕಲೆಹಾಕಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್)