ಬೆಂಗಳೂರು: ಚಿನ್ನಾಭರಣ ಅಂಗಡಿ ಮಾಲೀಕನಿಂದ 1 ಕೆಜಿ 277 ಗ್ರಾಂ ಚಿನ್ನ ಕಳವು ಮಾಡಿದ್ದ ಆರೋಪಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಅಂಕುಶ್ ಕುಮಾರ್ ( 32) ಬಂಧಿತ. 10.99 ಲಕ್ಷ ರೂ. ನಗದು, 384 ಗ್ರಾಂ ಚಿನ್ನದ ಗಟ್ಟಿ ಸೇರಿ 38 ಲಕ್ಷ ರೂ. ಮೌಲ್ಯದ ಕಳವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಚಿನ್ನಾಭರಣ ಮಾರಾಟದಲ್ಲಿ ನಷ್ಟ ಹೊಂದಿದ್ದ ಅಂಕುಶ್ ಕುಮಾರ್, ಆಭರಣ ಪಾಲಿಷ್ ಮತ್ತು ಹರಳುಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದ. ನಗರತ್‌ಪೇಟೆ ಚಿನ್ನದ ಅಂಗಡಿ ಮಾಲೀಕರಿಂದ ಹಲವು ಬಾರಿ ಚಿನ್ನಾಭರಣ ಪಡೆದು ಪಾಲಿಶ್ ಮತ್ತು ಹರಳು ಕೂರಿಸಿಕೊಟ್ಟು ವಿಶ್ವಾಸ ಗಳಿಸಿದ್ದ.
ಆದರೆ, ಮೇ 30ರಿಂದ 1 ತಿಂಗಳ ಅವಧಿಯಲ್ಲಿ 1 ಕೆಜಿ 277 ಗ್ರಾಂ ಚಿನ್ನದ ಆಭರಣಗಳನ್ನು ಪಡೆದು ವಾಪಸ್ ಕೊಟ್ಟಿರಲಿಲ್ಲ. ಕೊನೆಗೆ ನಗರತ್‌ಪೇಟೆಯ ಅಂಗಡಿಯನ್ನು ಸಹ ಖಾಲಿ ಮಾಡಿಕೊಂಡು ಪರಾರಿ ಆಗಿದ್ದ. ಈ ಕುರಿತು ಚಿನ್ನದಂಗಡಿ ಮಾಲೀಕ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡ ಹಲಸೂರು ಗೇಟ್ ಪೊಲೀಸರು, ಆರೋಪಿ ಚಲನವಲವನ್ನು ಸಿಸಿ ಕ್ಯಾಮರಾದಲ್ಲಿ ಸಂಗ್ರಹಿಸಿದ್ದರು. ಕೊನೆಗೆ ಮೊಬೈಲ್ ನೆಟ್ ವರ್ಕ್ ಪರಿಶೀಲನೆ ನಡೆಸಿದಾಗ ರಾಜಸ್ಥಾನದ ಬಿಲ್ವಾರ ಜಿಲ್ಲೆಯ ಕಲಿಯಾಸ್‌ಗ್ರಾಮದಲ್ಲಿ ಅಡಗಿರುವ ಮಾಹಿತಿ ಲಭ್ಯವಾಗಿದ್ದು, ವಿಶೇಷ ತಂಡ ರಾಜಸ್ಥಾನಕ್ಕೆ ಹೋಗಿ ಆರೋಪಿಯನ್ನು ಬಂಧಿಸಿ ಕರೆತಂದಿದೆ. ವಂಚನೆ ಮಾಡಿದ್ದ ಚಿನ್ನವನ್ನು ಕರಗಿಸಿ ಚಿನ್ನದ ಗಟ್ಟಿಗಳನ್ನಾಗಿ ಮಾರ್ಪಡಿಸಿ, ನಗರದ ವಿವಿಧ ಆಭರಣ ಅಂಗಡಿಗಳಲ್ಲಿ ಮಾರಾಟ ಮಾಡಿ ಹಣ ಪಡೆದು ಊರಿಗೆ ಹೋಗಿದ್ದಾಗಿ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.