ನವದೆಹಲಿ: ಕೋವೊವಾಕ್ಸ್ ಮತ್ತು ಕಾರ್ಬೆವಾಕ್ಸ್ ಲಸಿಕೆ ಹಾಗೂ ಮೊಲ್ನುಪಿರವಿರ್ ಮಾತ್ರೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಭಾರತದಲ್ಲಿ ಅನುಮತಿ ಪಡೆದ ಕರೊನಾ ತಡೆ ಚುಚ್ಚುಮದ್ದುಗಳ ಸಂಖ್ಯೆ ಎಂಟಕ್ಕೆ ಏರಿದೆ. ಕೊವ್ಯಾಕ್ಸಿನ್, ಕೋವಿಶೀಲ್ಡ್, ರಷ್ಯಾದ ಸ್ಪುಟ್ನಿಕ್-ವಿ, ಝೈಕೋವ್-ಡಿ, ಮಾಡರ್ನಾ, ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಯ ತುರ್ತು ಬಳಕೆಗೆ ಈಗಾಗಲೇ ಅನುಮತಿ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ) ಈ ಎರಡು ಲಸಿಕೆ ಮತ್ತು ಮಾತ್ರೆಯ ತುರ್ತಬಳಕೆಗೆ ಒಪ್ಪಿಗೆ ನೀಡಿದೆ ಎಂದು ಆರೋಗ್ಯ ಸಚಿವ. ಡಾ.ಮನಸುಖ್ ಮಾಂಡವೀಯ ತಿಳಿಸಿದ್ದಾರೆ. ಅಮೆರಿಕದ ಮೆರ್ಕ್ ಕಂಪನಿಯ ಮೊಲ್ನುಪಿರವಿರ್ ಮಾತ್ರೆ ವೈರಲ್ ತಡೆಯುವ ಗುಳಿಗೆಯಾಗಿದ್ದು, ಇದನ್ನು ಭಾರತದಲ್ಲಿ 13 ಕಂಪನಿಗಳು ಉತ್ಪಾದಿಸುತ್ತಿವೆ. ಈ ಮಾತ್ರೆಯನ್ನು ಕೋವಿಡ್ ಸೋಂಕು ಪೀಡಿತ ವಯಸ್ಕ ರೋಗಿಗಳಿಗೆ ತುರ್ತು ಸನ್ನಿವೇಶದಲ್ಲಿ ಮಾತ್ರ ನೀಡಲು ಶಿಫಾರಸು ಮಾಡಲಾಗಿದೆ ಎಂದು ಮಾಂಡವೀಯ ಟ್ವೀಟ್ ಮಾಡಿದ್ದಾರೆ. ಮೊಲ್ನುಪಿರವಿರ್ ಮಾತ್ರೆಗೆ ಬ್ರಿಟನ್ ಮತ್ತು ಅಮೆರಿಕದ ಔಷಧ ನಿಯಂತ್ರಣ ಪ್ರಾಧಿಕಾರಗಳು ಈಗಾಗಲೇ ಒಪ್ಪಿಗೆ ಕೊಟ್ಟಿವೆ.
ಕೋವೊವಾಕ್ಸ್ ನ್ಯಾನೊಪಾರ್ಟಿಕಲ್ ಲಸಿಕೆ ಆಗಿದ್ದು, ಇದನ್ನು ಪುಣೆ ಮೂಲದ ಸೆರಂ ಇನ್ಸ್ಟಿಟ್ಯೂಟ್ ಅಭಿವೃದ್ಧಿ ಪಡಿಸಿದೆ. ಈ ಸಂಸ್ಥೆ ಈಗಾಗಲೇ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಕಾರ್ಬೆವಾಕ್ಸ್ ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಪಡಿಸಿದ, ಆರ್ಬಿಡಿ ಪ್ರೊಟೀನ್ ಹೊಂದಿರುವ ಲಸಿಕೆ ಆಗಿದೆ. ಇದನ್ನು ಹೈದರಾಬಾದ್ ಮೂಲದ ಬಯೋಲಾಜಿಕಲ್-ಇ ಕಂಪನಿ ಅಭಿವೃದ್ದಿ ಪಡಿಸಿದೆ. ಈ ಕಂಪನಿ ಸ್ವದೇಶಿಯಾಗಿ ಅಭಿವೃದ್ಧಿ ಪಡಿಸಿದ 3ನೇ ಲಸಿಕೆ ಇದಾಗಿದೆ. ಎಂದಿದ್ದಾರೆ. ಜನವರಿ 3ರಿಂದ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಹಾಗೂ ಕರೊನಾ ವಾರಿಯರ್ಸ್ ಗೆ ಹಾಗೂ ಅನ್ಯವ್ಯಾಧಿಯಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವರಿಗೆ ಮೂರನೇ ಡೋಸ್ ಲಸಿಕೆಯನ್ನು ಜನವರಿ 10ರಿಂದ ನೀಡಲು ಘೋಷಿಸಿರುವ ಹಿನ್ನೆಲೆಯಲ್ಲಿ ಹೊಸ ಲಸಿಕೆಗಳು ಮತ್ತು ಮಾತ್ರೆಗೆ ಅನುಮೋದನೆ ನೀಡಿರುವುದು ಮಹತ್ವದ ಬೆಳವಣಿಗೆ ಆಗಿದೆ. ಇದರಿಂದ ದೇಶದ ಲಸಿಕಾ ಅಭಿಯಾನಕ್ಕೆ ಹೆಚ್ಚು ಸಂಪನ್ಮೂಲ ದೊರಕಿದಂತಾಗಿದೆ.
ದೆಹಲಿಯಲ್ಲಿ ಸೆಮಿ ಲಾಕ್ಡೌನ್, ಶಾಲೆ-ಕಾಲೇಜು ಸ್ಥಗಿತ: ದೆಹಲಿಯಲ್ಲಿ ಈವರೆಗೆ 165 ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ದೆಹಲಿ ವಿಕೋಪ ನಿರ್ವಹಣಾ ಪ್ರಾಧಿಕಾರ ಭಾಗಶಃ ಲಾಕ್ಡೌನ್ ನಿರ್ಧಾರ ಕೈಗೊಂಡಿದ್ದು, ಯೆಲ್ಲೋ ಅಲರ್ಟ್ ಘೊಷಿಸಿದೆ. ನೈಟ್ ಕರ್ಫ್ಯೂ ಜತೆಗೆ ಇನ್ನಷ್ಟು ನಿರ್ಬಂಧಗಳು ಜಾರಿಯಾಗಲಿವೆ. ಶಾಲೆ, ಕಾಲೇಜು ತರಗತಿಗಳು ಆನ್ಲೈನ್, ಸಿನಿಮಾ, ಪಿವಿಆರ್, ಜಿಮ್ ಸೆಂಟರ್ ಬಂದ್. ರೆಸ್ಟೋರೆಂಟ್ ಬಾರ್ಗಳು 10 ಗಂಟೆವರೆಗೆ ತೆರೆಯಬಹುದು. ಶೇ.50 ಗ್ರಾಹಕರಿಗೆ ಮಾತ್ರ ಅವಕಾಶ. ಆನ್ಲೈನ್ ಮೂಲಕ ಆಹಾರ ಡೆಲಿವರಿ ಹೆಚ್ಚು ಆದ್ಯತೆ. ಮಾಲ್ ಮತ್ತು ಶಾಪ್ಗಳು ಸಮ-ಬೆಸ ಆಧಾರದಲ್ಲಿ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ತೆರೆಯಬಹುದು. ಪ್ರತ್ಯೇಕವಾಗಿ ಇರುವ ಅಂಗಡಿಗಳಿಗೆ ಸಮ-ಬೆಸ ನಿಯಮ.ಅನ್ವಯ ಇಲ್ಲ. ಸ್ಪಾ, ಸೆಲೂನ್
ಶಾಪ್ಗೆ ನಿರ್ಬಂಧ ಇಲ್ಲ. ಮೆಟ್ರೋ ಮತ್ತು ಬಸ್, ಆಟೋ, ಟ್ಯಾಕ್ಸಿಗಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ. ಆದೇಶ ಜಾರಿಯಲ್ಲಿರುವ ತನಕ ದೊಡ್ಡ ಪ್ರಮಾಣದಲ್ಲಿ ಜನ ಸೇರಿ ಸಾಮಾಜಿಕ, ಧಾರ್ವಿುಕ, ರಾಜಕೀಯ ಸಭೆಗಳನ್ನು ನಡೆಸುವಂತಿಲ್ಲ. ವಿದೇಶದಿಂದ ಬಂದವರ ಆರೋಗ್ಯದ ಮೇಲೆ ನಿಗಾ ಇರಿಸಲು ಹೋಟೆಲ್ಗಳಲ್ಲಿ ಕ್ವಾರಂಟೈನ್ ಮಾಡಲು ಆದೇಶಿಸಲಾಗಿದೆ. ‘ಎರಡು ದಿನಗಳಿಂದ ಶೇ. 0.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಕಂಡುಬರುತ್ತಿದೆ. ಆದ್ದರಿಂದ ಒಂದನೇ ಹಂತದ (ಯೆಲ್ಲೊ) ಅಲರ್ಟ್ ಘೋಷಣೆ ಮಾಡಲಾಗಿದೆ’ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಿರಿಯ ಅಧಿಕಾರಿಗಳ ಜತೆಗಿನ ಸಭೆಯ ನಂತರ ಹೇಳಿದ್ದಾರೆ.
11,500 ವಿಮಾನ ಸಂಚಾರ ರದ್ದು: ಕರೊನಾ ವ್ಯಾಪಕವಾಗಿರುವ ಕಾರಣ ಜಾಗತಿಕವಾಗಿ 11,500ಕ್ಕೂ ಹೆಚ್ಚು ವಿಮಾನಗಳ ಸಂಚಾರ ಶುಕ್ರವಾರದಿಂದೀಚೆಗೆ ರದ್ದುಗೊಂಡಿದೆ. ಇದರಿಂದ ಕ್ರಿಸ್ವುಸ್ ಮತ್ತು ಹೊಸ ವರ್ಷದ ರಜೆಯ ಕಾರಣ ಪ್ರವಾಸ ಕೈಗೊಂಡಿರುವ ಜನರಿಗೆ ಅತೀವ ಸಮಸ್ಯೆ ಆಗಿದೆ. ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲಾಗದೆ ವಿಮಾನಯಾನ ಸಂಸ್ಥೆಗಳು ಹೈರಾಣ ಆಗಿವೆ.
ಚೀನಾದ ಕ್ಯಾತೆ, ಅಮೆರಿಕ ವಿಮಾನ ವಾಪಸ್: ಶುಚಿತ್ವದ ಕಾರಣದಿಂದ ಡೆಲ್ಟಾ ಏರ್ಲೈನ್ಸ್ ವಿಮಾನವನ್ನು ಚೀನಾ, ಅಮೆರಿಕಕ್ಕೆ ವಾಪಸು ಕಳುಸಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ. ಅಮೆರಿಕದ ಸಿಯಾಟಲ್ನಿಂದ ಆಗಮಿಸಿದ ಈ ವಿಮಾನ ಚೀನಾದ ಶಾಂಘೈನಲ್ಲಿ ಡಿಸೆಂಬರ್ 21ರಂದು ಇಳಿಯಬೇಕಿತ್ತು. ಆದರೆ, ಅದಕ್ಕೆ ಅವಕಾಶ ನೀಡದೆ. ವಾಪಸು ಕಳುಹಿಸಲಾಯಿತು. ಏಕೆಂದರೆ, ಕರೊನಾ ಸಂಬಂಧವಾಗಿ ಶುಚಿತ್ವದ ಕುರಿತು ಚೀನಾದಲ್ಲಿ ಡಿ.20ರಿಂದ ಹೊಸ ನಿಯಮಗಳು ಜಾರಿಗೆ ಬಂದಿದ್ದವು. ಇದರ ಅನ್ವಯ ವಿಮಾನವನ್ನು ಇಳಿಸದಂತೆ ಸೂಚಿಸಲಾಯಿತು.
ಶಿಫಾರಸು ಇಲ್ಲದೆಯೂ ಬೂಸ್ಟರ್ ಡೋಸ್: ಅನ್ಯವ್ಯಾಧಿಯಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವರಿಗೆ ವೈದ್ಯರ ಶಿಫಾರಸು ಪತ್ರ ಇಲ್ಲದಿದ್ದರೂ ಬೂಸ್ಟರ್ ಡೋಸ್ ನೀಡಲಾಗುವುದು. ಆದರೆ, ಈ ಮುಂಜಾಗ್ರತಾ ಡೋಸ್ ಪಡೆಯುವುದಕ್ಕೂ ಮುನ್ನ ಅವರು ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳಿತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ. ಜ. 10ರಿಂದ ಆರಂಭವಾಗುವ ಈ ಬೂಸ್ಟರ್ ಡೋಸ್ ಅಭಿಯಾನದಲ್ಲಿ ಲಸಿಕೆ ಪಡೆಯಲು ಅನ್ಯವಾಧಿಯಿಂದ ರಿಸ್ಕ್ ಇದೆ ಎಂಬ ವೈದ್ಯರ ಸಲಹಾ ಚೀಟಿಯನ್ನು ತಂದವರಿಗೆ ಮಾತ್ರ ಚುಚ್ಚುಮದ್ದು ನೀಡಲಾಗುವುದು ಎಂದು ಈ ಹಿಂದೆ ಸರ್ಕಾರ ಹೇಳಿತ್ತು.
ಜಾಗತಿಕವಾಗಿ 14.4 ಲಕ್ಷ ದೈನಿಕ ಕೇಸ್: ಜಾಗತಿಕವಾಗಿ 14.4 ಲಕ್ಷ ದೈನಿಕ ಕೋವಿಡ್ ಕೇಸ್ಗಳು ವರದಿಯಾಗಿದ್ದು, ಇದು ಈ ವರ್ಷದಲ್ಲಿ ವಿಶ್ವದಾಖಲೆ ಆಗಿದೆ. 2020ರ ಡಿಸೆಂಬರ್ನಲ್ಲಿ ಏಕದಿನದಲ್ಲಿ ದೃಢಪಟ್ಟಿದ ಪ್ರಕರಣಗಳ ಸಂಖ್ಯೆಯನ್ನು ಇದು ಮೀರಿಸಿದೆ.
ಚುನಾವಣಾ ಕರ್ತವ್ಯಕ್ಕೆ ನಿಯುಕ್ತರಾಗುವ ನೌಕರರನ್ನು ಕೋವಿಡ್ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಅವರಿಗೂ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು ಎಂದ ಸರ್ಕಾರ