ಸಾಗರ: ಪಶ್ಚಿಮ ಘಟ್ಟದ ಶ್ರೇಣಿ ಜೀವ ವೈವಿಧ್ಯದ ಆಗರ. ಇಲ್ಲಿ ನಿತ್ಯ ಹರಿದ್ವರ್ಣದ, ಸೂರ್ಯನ ಕಿರಣ ಒಳಗೆ ಪ್ರವೇಶಿಸದ ಅಭೇದ್ಯ ಕಾಡುಗಳಿವೆ. ಒಂದೆಡೆ ಮರ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದರೂ ಗ್ರಾಮೀಣ ಜನರು ದೇವರ ಕಾಡಿನ ಹೆಸರಿನಲ್ಲಿ ಅರಣ್ಯ ಸಂರಕ್ಷಣೆ ಮಾಡುತ್ತಿದ್ದಾರೆ.
ಸಾಗರ ತಾಲೂಕಿನಲ್ಲಿ ರಾಚಮ್ಮನ ಕಾಡು, ಹೊಸಗುಂದ ದೇವರ ಕಾಡು, ಬರೂರಿನ ಸಿದ್ದೇಶ್ವರ ದೇವರ ಕಾಡು ಇಂದಿಗೂ ಸಮೃದ್ಧವಾಗಿವೆ. ಅರಣ್ಯ ಇಲಾಖೆ ಮತ್ತು ಗ್ರಾಮ್ಯ ಅರಣ್ಯ ಸಮಿತಿಗಳನ್ನು ಒಳಗೊಂಡಂತೆ ಕಾಡನ್ನು ಸಂರಕ್ಷಿಸುವ, ಸಂವರ್ಧನಗೊಳಿಸುವ ದೇವಿ ವನ ಮತ್ತು ದೇವರ ಕಾಡಿನ ಯೋಜನೆಗಳು ಇವುಗಳನ್ನು ಜೀವಂತವಾಗಿರಿಸಿವೆ.
ಸಾಗರದಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಬರೂರು ಗ್ರಾಮಕ್ಕೆ ತಾಗಿಕೊಂಡಂತೆ ಸುಮಾರು 300 ಎಕರೆ ದಟ್ಟವಾದ ಕಾನನವಿದೆ. ಇದರಲ್ಲಿ ಸರ್ವೇ ನಂ.137ರಲ್ಲಿ 110 ಎಕರೆ ವಿಸ್ತೀರ್ಣವನ್ನು ಸಿದ್ದೇಶ್ವರ ದೇವರ ಕಾಡು ಎಂದು ಘೋಷಿಸಿ ಸಂರಕ್ಷಿಸಲಾಗಿದೆ.
ಸಿದ್ದೇಶ್ವರ ದೇವರ ಕಾಡಿಗೆ ತಾಗಿಕೊಂಡಿರುವ ಸಿದ್ದೇಶ್ವರ ದೇವಾಲಯವನ್ನು ಗ್ರಾಮಸ್ಥರು ಜೀರ್ಣೋದ್ಧಾರ ಮಾಡಿದ್ದಾರೆ. ಈ ಕಾಡಿನಲ್ಲಿ ಬೇಸಿಗೆಯಲ್ಲೂ ಬಿಸಿಲು ಪ್ರವೇಶಿಸಲು ಸಾಧ್ಯವಾಗದಷ್ಟು ಮುಗಿಲೆತ್ತರದ ಮರಗಳಿವೆ. ಒಳಗೆ ತಣ್ಣನೆಯ ವಾತಾವರಣ. ನೆಲ ಹಾಸಿನಂತೆ ದರಗು, ಜೀರುಂಡೆ, ದಪ್ಪ ಗಾತ್ರದ ಇರುವೆಗಳು ಹೀಗೆ ಹತ್ತು ಹಲವು ಜೀವವೈವಿಧ್ಯ ಇಲ್ಲಿವೆ. ನಂದಿ, ಹಲಸು, ಶಿವನೆ, ಸುರಗಿ, ಹುನಾಲು, ತೇಗ ಹೀಗೆ ಹತ್ತು ಹಲವು ಮರಗಳಿವೆ. ಇದೆಲ್ಲದರ ಮಧ್ಯೆ ‘ಸೀತಾ ಅಶೋಕ’ ಎಂಬ ಅಪರೂಪದ ಮರವಿದೆ. ಇದನ್ನು ರಾಜ್ಯ ಜೀವ ವೈವಿಧ್ಯತಾ ಮಂಡಳಿ ವಿಶೇಷ ಹೂವೆಂದು ಪರಿಗಣಿಸಿದೆ. ಈ ವೃಕ್ಷ ಗಿಡಮೂಲಿಕೆಯ ಗುಣಗಳನ್ನು ಹೊಂದಿದೆ.
ಬರೂರು ಕಾಡಿನ ಇತಿಹಾಸ: ಕಾಡುಗಳು ಚೌಡಿ ಬನ, ಭೂತದ ಕಾಡು, ಮಾರಮ್ಮನ ತೋಪು, ಜಟ್ಟಿವನ, ನಾಗಬನ ಹೀಗೆ ದೈವ ಸ್ವರೂಪಗಳನ್ನು ಪಡೆದಿವೆ. ಸಿದ್ದೇಶ್ವರ ದೇವರ ಕಾಡು ಅಪರೂಪದ ಸೀತಾ ಅಶೋಕ ಮರಗಳನ್ನು ಹೊಂದಿದೆ. ಕೆಳದಿ ಅರಸರ ಕಾಲದಲ್ಲಿ ಬೂದಿ ಬಸಪ್ಪ ಎನ್ನುವ ಪಾಳೆಗಾರ ಬರೂರು ಭಾಗದ ವಿವಿಧ ಕಾಡುಗಳನ್ನು ಸಂರಕ್ಷಿಸುತ್ತಿದ್ದನಂತೆ. ಅಲ್ಲಿಯ ಗ್ರಾಮದ ವನ್ಯಜೀವಿಗಳ ಸಂರಕ್ಷಣೆಗೋಸ್ಕರ ವಿವಿಧ ಹಣ್ಣುಗಳ ಗಿಡಗಳನ್ನು ಸಿದ್ದೇಶ್ವರ ದೇವರ ಕಾಡಿನಲ್ಲಿ ನೆಟ್ಟು ಪೋಷಿಸುತ್ತಿದ್ದ ಎನ್ನುವ ಪ್ರತೀತಿ ಇದೆ. ಇಂತಹ ಕಾಡನ್ನು ರಕ್ಷಿಸುವಲ್ಲಿ ಗ್ರಾಮ ಅರಣ್ಯ ಸಮಿತಿ ಪ್ರಯತ್ನ ಮಾಡುತ್ತಿದೆ.
110 ಎಕರೆ ವಿಸ್ತೀರ್ಣದ ಕಾಡು: ಸಾಗರ ತಾಲೂಕಿನಲ್ಲಿ ದೇವರ ಕಾಡುಗಳನ್ನು ಸಂರಕ್ಷಿಸುವ ಕೆಲಸ ಸರ್ಕಾರ ಮತ್ತು ಗ್ರಾಮ ಅರಣ್ಯ ಸಮಿತಿಗಳಿಂದ ನಡೆಯುತ್ತಿದೆ. ತ್ಯಾಗರ್ತಿ ಶಾಖೆಯ ಬರೂರು ಗ್ರಾಮದ ಸಿದ್ದೇಶ್ವರ ದೇವರ ಕಾಡನ್ನು ವ್ಯವಸ್ಥಿತವಾಗಿ ಕಾಪಾಡಲಾಗಿದೆ. 110 ಎಕರೆ ವಿಸ್ತೀರ್ಣವಿರುವ ಕಾಡಿನಲ್ಲಿ ಸೀತಾ ಅಶೋಕ ಮರಗಳು ಕಾಣಸಿಗುತ್ತವೆ. ಇದರ ಹೂವು, ಬೀಜ, ಕಾಂಡಗಳನ್ನು ಗಿಡಮೂಲಿಕೆಗೆ ಬಳಸಲಾಗುತ್ತದೆ. ರಾಜ್ಯದ ಜೀವ ವೈವಿಧ್ಯತಾ ಮಂಡಳಿ ವಿಶೇಷ ಅಧ್ಯಯನ ನಡೆಸಿದ್ದು, ಇದನ್ನು ಜೀವವೈವಿಧ್ಯತಾ ತಾಣವನ್ನಾಗಿ ಘೋಷಿಸುವ ಪ್ರಯತ್ನ ಮಾಡುತ್ತಿದೆ ಎಂದು ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ಕುಮಾರ್ ವಿಜಯವಾಣಿಗೆ ಮಾಹಿತಿ ನೀಡಿದರು.