ಬೆಂಗಳೂರು: ದುಷ್ಕರ್ಮಿಗಳು ದೇವಾಲಯದ ಗೋಪುರದ ವಿಗ್ರಹ ಹಾಗೂ ದೇವರ ಆಯುಧಗಳನ್ನು ಮುರಿದು ವಿರೂಪಗೊಳಿಸಿರುವ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಬೊಮ್ಮನಹಳ್ಳಿ ಸರ್ಕಲ್‌ನ ಸುಬ್ರಮಣ್ಯಸ್ವಾಮಿ ದೇವಾಲಯದ ಗೋಪುರದ ಮೇಲ್ಭಾಗದಲ್ಲಿ ಸುಬ್ರಮಣ್ಯಸ್ವಾಮಿ ವಿಗ್ರಹ ಮತ್ತು ಆಯುಧವನ್ನು ಕಿಡಿಗೇಡಿಗಳು ಮುರಿದು ಭಗ್ನಗೊಳಿಸಿದ್ದಾರೆ. ನ.೮ ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಈ ದೇವಸ್ಥಾನ ನಿರ್ವಹಣೆ ಮಾಡುತ್ತಿರುವ ಬೊಮ್ಮನಹಳ್ಳಿ ಬೇಗೂರು ರಸ್ತೆಯ ಮಾರುತಿ ಯುವಕರ ಸಂಘದ ಕಾರ್ಯದರ್ಶಿ ಬಿ.ಜಿ.ಮುನಿರೆಡ್ಡಿ ನೀಡಿದ ದೂರಿನ ಮೇರೆಗೆ ಬೊಮ್ಮನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.