ಶ್ರೀಮನ್ಮಧ್ವಾಚಾರ್ಯರು ಮಹಾಭಾರತದ ತಾತ್ಪರ್ಯ ನಿರ್ಣಯದಲ್ಲಿ ಈ ಸಂದರ್ಭವನ್ನು ಹೀಗೆ ವಿವರಿಸಿದ್ದಾರೆ : ‘ಇನ್ನು ಬೇರೇನೂ ಬೇಕಾಗಿಲ್ಲ. ದೊಡ್ಡವರು ನಮ್ಮ ಬಗ್ಗೆ, ಇವರು ನಮಗೆ ಬೇಕಾದವರು ಎಂದು ಹೇಳಿದರೆ ಸಾಕು ಪುಣ್ಯ ಬರುತ್ತದೆ. ಅದರಿಂದ ಮಂಗಲ ಆಗುತ್ತದೆ. ಅವರು ಏನೂ ಕೊಡುವುದು ಬೇಡ. ನಾವು ತೆಗೆದುಕೊಳ್ಳುವುದೂ ಬೇಡ. ಇವನು ಒಬ್ಬ ಸಾತ್ವಿಕ, ಸಾಧು, ಸಜ್ಜನ. ಇವನು ಒಳ್ಳೆಯವನು, ಇವನು ನನಗೆ ಬೇಕಾದವನು ಎಂಬ ಮಾತುಗಳು ಅವರ ಬಾಯಿಂದ ಬಂದರೆ ಸಾಕು. ಸಾಮಾನ್ಯ ಜ್ಞಾನಿಗಳು, ದೇವತೆಗಳು, ದೇವೋತ್ತಮರು, ಇನ್ನು ದೇವರಂತೂ ಕೇಳಬೇಕೇ? ಪಾಂಡವರು ನನ್ನವರು ಎಂದು ಕೃಷ್ಣ ಆಗಾಗ ಹೇಳುತ್ತಿದ್ದನಂತೆ. ಪಾಂಡವರು ತಮ್ಮ ಸಹಜ ಭಕ್ತಿಯಿಂದ ಮಹಾ ಪುಣ್ಯರಾಶಿಯನ್ನು ಸಂಪಾದನೆ ಮಾಡಿದವರು. ಕೃಷ್ಣ ಈ ಪಾಂಡವರು ನಮ್ಮವರು ಎನ್ನುವ ಮಾತ್ರದಿಂದ ಅವರ ಪುಣ್ಯ ಎರಡುಪಟ್ಟು ಹೆಚ್ಚು ಆಯಿತು.
ಪ್ರಿಯಾಃ ಇತ್ಯೇವ ಕಥನಾತ್ ಪಾಂಡವಾನಾಂ ಶುಭೋನ್ನತೇಃ ||
ದೇವರು ಇವನಿಗೆ ಒಳ್ಳೆಯದಾಗಲಿ ಎಂದರೆ ಸಾಕು ಅವರಿಗೆ ಶುಭ, ಪುಣ್ಯ ಹೆಚ್ಚಾಗುತ್ತದೆ. ಅಂತಹ ವಿಶಿಷ್ಟವಾಗಿ ಇರುವಂತಹ ಒಂದು ಅನುಗ್ರಹ ದೇವರ ಒಂದು ಮಾತಿನಲ್ಲಿ ಇದೆ. ಆದ್ದರಿಂದ ಶ್ರೀಕೃಷ್ಣ ಏನಾದರೂ ನಮ್ಮ ಬಗ್ಗೆ ಸ್ಮರಣೆ ಮಾಡಿದರೆ, ನಮಗೆ ಒಳ್ಳೆಯದಾಗಲಿ ಎಂದು ಅವನು ಹೇಳಿಬಿಟ್ಟರೆ ಸಾಕು, ನಮಗೆ ಒಳ್ಳೆಯದೇ ಆಗುತ್ತದೆ ಎಂದು ನಂದನು ಉದ್ಧವನಿಗೆ ವಿವರಿಸುತ್ತಾನೆ.