ರಿಪ್ಪನ್‌ಪೇಟೆ ಹೊಂಬುಜ ಜೈನಮಠದಲ್ಲಿ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಗೋಪೂಜೆ ನೇರವೇರಿಸಿದರು. ಸೋಂದಾ ಜೈನಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಇದ್ದರು. 
ನ್ಯೂಸ್

ಸರ್ವರನ್ನೂ ಪೋಷಿಸುವ ದೇವತೆ

ಸೋಮಶೇಖರ ಎನ್

ರಿಪ್ಪನ್‌ಪೇಟೆ: ಮಾತೃ ಸ್ವರೂಪಿಯಾಗಿರುವ ಗೋವು ನಮ್ಮೆಲ್ಲರನ್ನೂ ಸಲಹಿ ಪೋಷಿಸುವ ದೇವತೆ ಎಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಹೊಂಬುಜ ಜೈನ ಮಠದಲ್ಲಿ ಗೋಪೂಜೆ ನೇರವೇರಿಸಿ ಆಶೀರ್ವಚನ ನೀಡಿದ ಅವರು, ಪ್ರಾಣಿದಯಾ ಭಾವ ನಮ್ಮೆಲ್ಲರಲ್ಲೂ ಇರಬೇಕು. ಸಕಲ ಜೀವಿಗಳಲ್ಲಿ ಸದಾ ವಾತ್ಸಲ್ಯ ಇದ್ದರೆ ಅವು ಸಹ ಕುಟುಂಬದ ಸದಸ್ಯರಂತೆ ಸಹಜೀವನ ನಡೆಸುತ್ತವೆ. ವಿಶೇಷವಾಗಿ ಗೋವು ಮನುಷ್ಯರಿಗೆ ಬಹು ಅಗತ್ಯ ಪ್ರಾಣಿ. ಹಾಲು, ಸಗಣಿ, ಗೋಮೂತ್ರ ಸಮಾಜಕ್ಕೆ ಅಮೂಲ್ಯ. ಮನೆಯಲ್ಲಿ ಗೋವುಗಳನ್ನು ಸಾಕಿ ಪಾಲನೆ ಮಾಡುವುದರಿಂದ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದರು.

ಸೋಂದಾ ಜೈನಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು. ಗೋಶಾಲೆಯಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ಬಳಿಕ ಸ್ವಾಮೀಜಿ ಅವರು ಗೋವುಗಳಿಗೆ ಹಣ್ಣು, ಧಾನ್ಯಗಳನ್ನು ನೀಡಿದರು. ಶ್ರೀಮಠದ ಗಜರಾಣಿ ಐಶ್ವರ್ಯಾ, ಅಶ್ವಗಳಿಗೆ ಕಜ್ಜಾಯ ಅರ್ಪಿಸಿದರು. ಶ್ರೀಮಠದ ಗುರುಕುಲ ಶ್ರೀಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರಾವಕ-ಶ್ರಾವಕಿಯರು, ಭಕ್ತರು ಗೋವುಗಳಿಗೆ ಗೋಗ್ರಾಸ ನೀಡಿದರು. ರಿಪ್ಪನ್‌ಪೇಟೆ, ಹೆದ್ದಾರಿಪುರ, ಅರಸಾಳು, ಕೆಂಚನಾಲ, ಬೆಳ್ಳೂರು, ಹರತಾಳು ಮುಂತಾದೆಡೆ ಜನರು ಶ್ರದ್ಧಾಭಕ್ತಿಯಿಂದ ಗೋಪೂಜೆ ಹಾಗೂ ಬಲಿಪಾಡ್ಯಮಿ ಆಚರಿಸಿದರು.