ನ್ಯೂಸ್

ದೇವರು ಇಲ್ಲೇ ಇದ್ದಾನೆ

ಮೋಹನ್​ ಶೆಟ್ಟಿ

 | ಡೆನಿಸ್ ಡೆಸಾ, ಸಾರ್ವಜನಿಕ ಸಂಪರ್ಕಾಧಿಕಾರಿ, ಉಡುಪಿ ಧರ್ಮಪ್ರಾಂತ

ಓರ್ವ ದೈವಭಕ್ತೆಯಿದ್ದಳು. ಒಮ್ಮೆ ಆಕೆಯ ಕನಸಿನಲ್ಲಿ ದೇವರ ದರ್ಶನ ಪಡೆಯುತ್ತಾಳೆ. ‘ನಾಳೆ ನಾನು ನಿನ್ನ ಮನೆಗೆ ಭೇಟಿ ನೀಡಲಿದ್ದೇನೆ’ ಎಂದು ದೇವರು ಹೇಳಿದಾಗ ಆಕೆಗೆ ಎಲ್ಲಿಲ್ಲದ ಖುಶಿ. ದೇವರ ಆಗಮನಕ್ಕಾಗಿ ಕಾಯುತ್ತಾಳೆ. ಬೆಳಗ್ಗೆ 9 ಘಂಟೆ. ಯಾರೋ ಕರೆದ ಶಬ್ದ. ದೇವರು ಬಂದರೆಂದು ಓಡಿ ಬಂದು ನೋಡಿದರೆ ಒಬ್ಬ ಭಿಕ್ಷುಕಿ ಜ್ವರದಿಂದ ಬಳಲುತ್ತಿದ್ದ ತನ್ನ ಸಣ್ಣ ಮಗುವನ್ನು ಎತ್ತಿಕೊಂಡು, ಮಗುವಿನ ಚಿಕಿತ್ಸೆಗೆ ಹಣ ಬೇಡುತ್ತಾಳೆ.

ಆ ದೈವಭಕ್ತೆ, ಸಿಟ್ಟಿನಿಂದ ‘ಬೇಗ ಇಲ್ಲಿಂದ ತೆರಳು. ದೇವರು ಬರುವ ಸಮಯವಿದು’ ಎಂದು ಕಳಿಸುತ್ತಾಳೆ. ಮಧ್ಯಾಹ್ನ 12 ಘಂಟೆ. ಯಾರೋ ಬಾಗಿಲು ಬಡಿದ ಸದ್ದು. ಬಂದು ನೋಡಿದರೆ ಹಸಿವಿನಿಂದ ಬೆಂದ ಓರ್ವ ‘ಸ್ವಲ್ಪ ಊಟ ಬಡಿಸುತ್ತಿರಾ?’ ಎಂದು ಅಂಗಲಾಚುತ್ತಿದ್ದಾನೆ. ಅವನನ್ನೂ ಬೈದು ದೂರ ಕಳಿಸುತ್ತಾಳೆ. ಸಂಜೆ 6 ಘಂಟೆಯ ಸಮಯದಲ್ಲಿ ಒಬ್ಬಾತ ಕರೆಯುತ್ತಾನೆ. ಬಂದು ನೋಡಿದರೆ ಮತ್ತೆ ನಿರಾಸೆ.

ಓರ್ವ ಚಳಿಯಿಂದ ನಡುಗುತ್ತ ಕಂಬಳಿ ಇದ್ದರೆ ಕೊಡಮ್ಮ ಎಂದಾಗ ಆಕೆಯ ಕೋಪ ನೆತ್ತಿಗೆರುತ್ತದೆ. ಅವನನ್ನೂ ಅಲ್ಲಿಂದ ಓಡಿಸುತ್ತಾಳೆ. ದೇವರು ಬರಲೇ ಇಲ್ಲ ಎಂದು ದೇವರನ್ನು ಬಯ್ಯುತ್ತಾ ಮಲಗುತ್ತಾಳೆ. ಆ ರಾತ್ರಿ ದೇವರು ಪುನಃ ಪ್ರತ್ಯಕ್ಷವಾಗುತ್ತಾನೆ. ಆಕೆ ದೇವರನ್ನು ‘ನೀನು ಸುಳ್ಳು ಹೇಳಿದೆ’ ಎಂದು ದೂಷಿಸಲು ಆರಂಭಿಸುತ್ತಾಳೆ. ಆಗ ದೇವರು, ‘ಇಲ್ಲ ಮಗಳೇ. ನಾನು ಮೂರು ಬಾರಿ ಬಂದೆ. ನೀನು ನನ್ನನ್ನು ಗುರುತಿಸಲೇ ಇಲ್ಲ’ ಎನ್ನುತ್ತಾನೆ.

ಯಾವಾಗ ನಿನ್ನ ಬಡ ಸಹೋದರ ಸಹೋದರಿಯರಲ್ಲಿ ನನ್ನನ್ನು ಕಾಣುತ್ತಿಯೋ ಆಗ ನೀನು ನನ್ನ ದರ್ಶನ ಪಡೆಯುವುದು ಖಂಡಿತ ಎನ್ನುತ್ತಾನೆ. ಕ್ರಿಸ್ಮಸ್ ಹಬ್ಬದ ಆರ್ಥವೂ ಇದೇ. ಇಮ್ಮಾನುವೆಲ್ ಅಂದರೆ ದೇವರು ನಮ್ಮ ಮಧ್ಯೆ ಎಂದರ್ಥ. ಆತ ನಮ್ಮ ನಡುವೆಯೇ ಇದ್ದಾನೆ. ನಮಗೆ ಮಾತ್ರ ಆತನ ಗುರುತು ಸಿಗುತ್ತಿಲ್ಲ.

(ನಾಳೆಯ ಅಂತರಂಗ: ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ಶ್ರೀ ಜಗದ್ಗುರು ರಂಭಾಪುರಿ ಪೀಠ, ಬಾಳೆಹೊನ್ನೂರು)