ನ್ಯೂಸ್

ಸುತ್ತಲೂ ಆವರಿಸಿಕೊಂಡಿದ್ದಾನೆ ಪರಮಾತ್ಮ ನನ್ನೊಳಗೂ ಇದ್ದಾನೆ!

ಬಾಬುಪ್ರಸಾದ್​ ಮೋಡಿಸ್​
ಭಗವಂತನಿಗೆ ಆಸ್ತಿ, ಭಾತಿ, ನಾಮಧೇಯ, ಪ್ರೀತಿ ಎನ್ನುತ್ತಾರೆ. ನಮ್ಮ ಚೈತನ್ಯ- ಅಸ್ತಿ- ಇದೆ. ಭಾತಿ ಅದರ ಅನುಭವ ಉಂಟಾಗುತ್ತದೆ. ಚೈತನ್ಯವಿದೆ ಎಂಬ ಅನುಭವ ಉಂಟಾಗುತ್ತದೆ. ಪ್ರಾಣ ಇದೆ ಎನ್ನುವ ಅನುಭವ ಉಂಟಾಗುತ್ತದೆ. ಮತ್ತೆ ಪ್ರೀತಿ-ಎಲ್ಲವೂ ಪ್ರೀತಿಯಿಂದ ಮಾಡಲ್ಪಟ್ಟಿದೆ. ಈ ಪ್ರಪಂಚದ ಎಲ್ಲಾ ವಸ್ತುವಿನಲ್ಲೂ, ಪ್ರಪಂಚದ ಪ್ರತಿಯೊಬ್ಬರ ಹೃದಯದಲ್ಲೂ ಪ್ರೀತಿ ತುಂಬಿ ತುಳುಕುತ್ತಿದೆ. ಅದನ್ನು ಪ್ರಕಟ ಮಾಡಬೇಕು. ಆ ಪ್ರಕಟಣೆ ಮಾಡುವುದೇ ಸಾಧನೆ. ನಮ್ಮಲ್ಲಿ ಇಲ್ಲದೆ ಇರುವ ಗುಣಗಳನ್ನು ತರಿಸಿಕೊಳ್ಳಬೇಕು ಎಂದರೆ ಆಗುವುದಿಲ್ಲ. ನಮ್ಮಲ್ಲಿ ಎಲ್ಲಾ ಒಳ್ಳೆಯ ಗುಣಗಳೂ ಇವೆ ಎಂದು ತಿಳಿದುಕೊಳ್ಳಬೇಕು. ಈಗ ಕಾಣದೆ ಇದ್ದರೂ, ನಮ್ಮಲ್ಲಿ ಎಲ್ಲಾ ಸದ್ಗುಣಗಳೂ ಇವೆ ಎಂದು ಭಾವಿಸಬೇಕು.

ಹಾಗೆಯೇ ಶರಣಾಗತಿಗೂ. ಅಯ್ಯೋ! ನಾನು ಹೇಗೆ ಶರಣಾ ಗುವುದು? ಎಂಬ ಪ್ರಶ್ನೆಯನ್ನು ಕೇಳುತ್ತೀರಿ. ಹೇಗೆ ಶರಣಾಗುವುದು ಎಂದಲ್ಲ. ನಾನು ಶರಣಾಗಿದ್ದೇನೆ ಎನ್ನುವ ಧಾರಣೆಯನ್ನು ಸ್ವೀಕಾರ ಮಾಡಿಕೊಳ್ಳಬೇಕು. ಈ ಸತ್ಯವನ್ನು ಸ್ವೀಕಾರ ಮಾಡಬೇಕು. ಪರಮಾತ್ಮ ನನ್ನಿಂದ ದೂರ ಇಲ್ಲ. ನಾನು ಅವನಿಂದ ದೂರ ಇಲ್ಲ. ಒಂದು ದಿನ ಮಾಡಿ ನೋಡಿ ಈ ಪ್ರಯೋಗವನ್ನು. ಎಷ್ಟು ಉತ್ಸಾಹ, ಆನಂದ ನಿಮ್ಮೊಳಗಡೆ ಬರುತ್ತದೆ! ಒಂದು ಕಡೆ ಕುಳಿತು, ‘ಪರಮಾತ್ಮ ನನ್ನ ಸುತ್ತಲೂ ಆವರಿಸಿಕೊಂಡಿದ್ದಾನೆ. ನನ್ನ ಒಳಗೆ ಪರಮಾತ್ಮ ಇದ್ದಾನೆ. ನನ್ನ ಒಳಗೆ ಈಶ್ವರನಿದ್ದಾನೆ’ ಎಂಬ ಭಾವನೆ ಬರುತ್ತಿದ್ದ ಹಾಗೆಯೇ ಮನಸ್ಸು ಶಾಂತವಾಗುತ್ತದೆ. ದುಗುಡ, ದುಮ್ಮಾನ ಎಲ್ಲಾ ದೂರವಾಗುತ್ತದೆ. ತನ್ನಷ್ಟಕ್ಕೇ ತಾನಾಗಿಯೇ ಧ್ಯಾನ ಆಗುತ್ತದೆ.

ಹೀಗೆ ಅಂತಮುಖಿ ಆಗುತ್ತಿದ್ದಾಗಲೇ ನಮ್ಮಲ್ಲಿ ಎಲ್ಲಾ ತರಹದ ಪ್ರತಿಭೆ, ಶಕ್ತಿ, ಯುಕ್ತಿ, ಎಲ್ಲವೂ ಸಹಜವಾಗಿ ಬರುತ್ತದೆ. ಪ್ರಕೃತಿ ನಮಗೆ ಅನುಕೂಲವಾಗುತ್ತದೆ. ಎಷ್ಟೋ ಸಲ, ನಾವು ನೆನೆಸುವುದೆಲ್ಲಾ ಆಗುವುದೇ ಇಲ್ಲ, ಎಲ್ಲವೂ ವಿಪರೀತವಾಗಿಯೇ ಆಗುತ್ತದೆ. ಆ ವಿಚಾರಗಳು ಸರಿಯಾಗಬೇಕು ಎಂದರೆ, ನಮ್ಮ ಮಿದುಳಿನಲ್ಲಿ ಸರಿಯಾದ ತರಂಗಗಳು ಉಂಟಾಗಬೇಕಾದರೆ, ನಮ್ಮ ಒತ್ತಡಗಳಿಂದ ಬಿಡುಗಡೆಯನ್ನು ಹೊಂದಬೇಕು.

ಭಗವದ್ಗೀತೆಯಲ್ಲಿ ಹೇಳಿದ ಹಾಗೆ, ಈ ಜಗತ್ತಿನಲ್ಲಿ ಜ್ಞಾನಕ್ಕಿಂತಲೂ ಪವಿತ್ರಗೊಳಿಸುವ ವಸ್ತುವು ಬೇರೊಂದಿಲ್ಲ. ಯೋಗದಲ್ಲಿ ಸಿದ್ಧಿಯನ್ನು ಪಡೆದವನು ಕಾಲಾಂತರದಲ್ಲಿ ಅದನ್ನು ಕಂಡುಕೊಳ್ಳುತ್ತಾನೆ. ನಾವು ನಮ್ಮ ಪ್ರಯತ್ನದಿಂದ, ಜ್ಞಾನದಿಂದ, ನಮ್ಮ ಮನಸ್ಸಿನಲ್ಲಿ ಇರುವಂತಹ ಮಲವನ್ನು, ಆವರಣಗಳನ್ನು ದೂರ ಮಾಡಿಕೊಳ್ಳಬೇಕು. ಕಠಿಣವಾದ ತಪಸ್ಸು ಮಾಡಬೇಕು. ಎಲ್ಲೋ ಹಿಮಾಲಯದಲ್ಲಿ ಹೋಗಿ ಕುಳಿತುಕೊಳ್ಳಬೇಕು ಎಂದು ಅಂದುಕೊಳ್ಳಬೇಡಿ. ಪ್ರಪಂಚದಲ್ಲೇ ಇದ್ದು, ಸಂಸಾರದಲ್ಲೇ ಇದ್ದು ನಮ್ಮ ಹಿಂದಿನ ಎಷ್ಟೋ ಸಂತರು -ಬಸವಣ್ಣನವರು, ಅಕ್ಕಮಹಾದೇವಿಯವರು - ಎಷ್ಟು ಕೆಲಸ ಮಾಡಿದ್ದಾರೆ! ಸಮಾಜದಲ್ಲೇ ಇದ್ದು, ಸಮಾಜದಲ್ಲಿ ಎಲ್ಲಾ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಾ, ಚಿತ್ತವನ್ನು ಪ್ರಸನ್ನವಾಗಿ ಇಟ್ಟುಕೊಂಡು, ಶಾಂತವಾಗುವುದಕ್ಕೆ ಖಂಡಿತ ಸಾಧ್ಯ.

ನೀವು ಅದನ್ನು ಇಂದೇ ಪ್ರಾರಂಭಿಸಬೇಕು. ಅದಕ್ಕೆ ಯಾವ ರೀತಿಯ ತಯಾರಿಯೂ ಬೇಕಾಗಿಲ್ಲ. ನಮ್ಮಲ್ಲಿ ಎಲ್ಲಾ ತರಹದ ಸದ್ಗುಣಗಳೂ ಇವೆಯೆಂದು ಅಂದುಕೊಂಡು ಬಿಡುವುದು. ಈಶ್ವರನು ನಮ್ಮ ಹಿಂದೆ, ಮುಂದೆ, ಸುತ್ತಲೂ ಎಲ್ಲಾ ಕಡೆ ಇದ್ದಾನೆ. ಆದ್ದರಿಂದ, ನಾಮದ ಆಧಾರವನ್ನು ತೆಗೆದುಕೊಂಡು ಹೋಗುವುದು ಒಂದು. ಇನ್ನೊಂದು, ರೂಪದ ಆಧಾರವನ್ನು ತೆಗೆದುಕೊಂಡು ಹೋಗುವುದು.

ನಾವು ತಿರುಪತಿಗೆ ಹೋಗುತ್ತೇವೆ ಬೆಟ್ಟ ಹತ್ತಿಕೊಂಡು. ಆಮೇಲೆ ಹತ್ತು ಗಂಟೆಗಳ ಕಾಲ ಕ್ಯೂನಲ್ಲಿ ನಿಲ್ಲುತ್ತೇವೆ. ಆದರೆ ದೇವರ ಮುಂದೆ ಹೋದ ತಕ್ಷಣ ಕಣ್ಣುಮುಚ್ಚಿಕೊಂಡು ಬಿಡುತ್ತೇವೆ. ಏಕೆ? ಎಂದು ಒಬ್ಬರು ನಮಗೆ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ನಾವು ಹೇಳಿದೆವು: ಅದು ನಿಜ. ನಾಮ ಮತ್ತು ರೂಪವನ್ನು ಗೋವಿಂದ ಎಂದುಕೊಂಡು ಹೋಗುತ್ತೀರ. ಆ ದರ್ಶನ ಮಾಡುತ್ತಿದ್ದಾಗಲೇ ಮನಸ್ಸು ಅಂತಮುಖವಾಗುತ್ತದೆ. ಭಗವಂತ, ಈಶ್ವರ ನಮ್ಮ ಒಳಗಡೆಯೇ ಇದ್ದಾನೆ, ನಮ್ಮ ಹೃದಯದಲ್ಲೇ ಇದ್ದಾನೆ ಎಂಬ ಸೂಚಿ ಅದು. ಕಣ್ಣು ಮುಚ್ಚುವುದು ಸಹಜವಾಗಿಯೇ ಆಗುತ್ತದೆ. ನಮಗೆ ಆನಂದ ಉಂಟಾದಾಗೆಲ್ಲಾ, ತೃಪ್ತಿ ಉಂಟಾದಾಗೆಲ್ಲಾ ಕಣ್ಣು ಮುಚ್ಚುತ್ತೇವೆ. ಮನಸ್ಸಿಗೆ, ಮಿದುಳಿಗೆ ವಿಶ್ರಾಮ ಸಿಕ್ಕಿದಾಗ, ಕಣ್ಣು ಮುಚ್ಚುತ್ತೇವೆ. ಪರಮಾತ್ಮ ಸಚ್ಚಿದಾನಂದ.

ಅಸ್ತಿ, ಭಾತಿ, ಪ್ರೀತಿ, ನಾಮ, ರೂಪ. ಈ ಪ್ರಪಂಚ ನಾಮ ಹಾಗೂ ರೂಪದಿಂದ ತುಂಬಿದೆ. ಈಶ್ವರ, ಅಸ್ತಿ, ಭಾತಿ, ಹಾಗೂ ಪ್ರೇಮಮಯವಾದ ವಾತಾವರಣ. ಇಡೀ ಪ್ರಪಂಚವೇ ಪ್ರೇಮದಿಂದ ತುಂಬಿದೆ. ಆ ಪ್ರೇಮದ ವಿಕೃತ ಸ್ವಭಾವವೇ ಇದೆಲ್ಲ. ಎರಡು ರೀತಿಯ ಆರಾಧನೆ. ಎರಡೂ ಶ್ರೇಷ್ಠವಾದದ್ದು. ನಮ್ಮ ಪುರಾತನ ಭಾರತೀಯ ಸಂಸ್ಕೃತಿಯಲ್ಲಿ ಎರಡಕ್ಕೂ ಸಮ್ಮತಿ ನೀಡಿದ್ದಾರೆ, ನಾಮಕ್ಕೂ ಮತ್ತು ರೂಪಕ್ಕೂ ಪ್ರಾಶಸ್ಱವನ್ನು ನೀಡಿದ್ದಾರೆ. ಈಶ್ವರನನ್ನು ನಾಮದಿಂದ ಅಥವಾ ರೂಪದಿಂದ ಆರಾಧಿಸಬಹುದು. ಈ ಎರಡೂ ಕ್ರಮಗಳಿಂದ ನೀವು ಅಂತಮುಖರಾಗುವುದೇ ಮುಖ್ಯ.

(ಲೇಖಕರು ಆಧ್ಯಾತ್ಮಿಕ ಚಿಂತಕರು, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು. ಪ್ರತಿಕ್ರಿಯಿಸಿ:  instagram@gurudev.kannada )