ನ್ಯೂಸ್

ಹನುಮಂತನ ಹೆಸರಲ್ಲೂ ರೇಷನ್​ ಕಾರ್ಡ್​! ಹನುಮನ ಅಪ್ಪನ ಹೆಸರು ಏನು ಗೊತ್ತಾ?

ಜೈಪುರ: ರೇಷನ್​ ಕಾರ್ಡ್​ನ್ನು ಕುಟುಂಬಸ್ಥರ ಹೆಸರಿನಲ್ಲಿ ಮಾಡಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಒಂದು ಊರಿನಲ್ಲಿ ಊರಿನ ದೇವರಾದ ಹನುಮ ದೇವ ಮತ್ತು ಮುರಳಿ ಮನೋಹರನ ಹೆಸರಲ್ಲೂ ರೇಷನ್​ ಕಾರ್ಡ್​ ಮಾಡಿಸಲಾಗಿದೆ. ಅದಷ್ಟೇ ಅಲ್ಲದೆ ಪ್ರತಿ ತಿಂಗಳು ಆ ಕಾರ್ಡ್​ಗಳಿಗೆ ಬರುವ ಸೀಮೆಎಣ್ಣೆಯನ್ನೂ ತೆಗೆದುಕೊಳ್ಳಲಾಗುತ್ತಿದೆಯಂತೆ.

ಇಂತದ್ದೊಂದು ವಿಚಿತ್ರ ಘಟನೆ ರಾಜಸ್ಥಾನದ ಭರತ್​ಪುರ ಜಿಲ್ಲೆಯ ರುಡಾವಲ್ ಪಂಚಾಯಿತಿಯಲ್ಲಿ ನಡೆಯುತ್ತಿದೆ. ಹನುಮ ದೇವರ ಹೆಸರಿನಲ್ಲಿ ಎಪಿಎಲ್​ ಕಾರ್ಡ್​ ಮಾಡಿಸಲಾಗಿದೆ. ಹನುಮನ ವಯಸ್ಸನ್ನು 81 ವರ್ಷ ಎಂದು ಬರೆಸಲಾಗಿದ್ದು, ತಂದೆಯ ಹೆಸರನ್ನು ಕೇಸರಿ ಎಂದು ಬರೆಸಲಾಗಿದೆ. ಅದರ ಜತೆ ಒಂದಿಷ್ಟು ಹೆಸರನ್ನು ಕುಟುಂಬಸ್ಥರು ಎಂದು ನಮೂದಿಸಲಾಗಿದೆ.

ಮುರುಳಿ ಮನೋಹರ್​ ಜೀ ಹೆಸರಿನ ಎಪಿಲ್​ ಕಾರ್ಡ್​ನಲ್ಲಿ 121 ವರ್ಷ ವಯಸ್ಸನ್ನು ನಮೂದಿಸಲಾಗಿದೆ. ಈ ಎರಡೂ ಕಾರ್ಡ್​ಗಳಲ್ಲಿ ಹನುಮ ದೇವರು ಮತ್ತು ಮುರುಳಿ ಮನೋಹರ ದೇವರ ಫೋಟೋವನ್ನೂ ಲಗತ್ತಿಸಲಾಗಿದೆ.

ಈ ನಕಲಿ ಕಾರ್ಡ್​ಗಳ ಸುದ್ದಿ ಹರಿದಾಡುತ್ತಿದ್ದಂತೆಯೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ರುಡಾವಲ್​ನ ಈ ಕಾರ್ಡ್​ಗಳ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ