ಉಡುಪಿ: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರಿನಲ್ಲಿದ್ದ 45 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಹುಡುಕಿ, ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಉಡುಪಿಯ ಮುಳುಗುತಜ್ಞ ಈಶ್ವರ ಮಲ್ಪೆ ಗಮನ ಸೆಳೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಬೇಲೂರು ರಸ್ತೆ ಮಾರ್ಗದಲ್ಲಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ನದಿಗೆ ಸೋಮವಾರ ಬೆಳಗ್ಗೆ ಉರುಳಿತ್ತು. ಕಾರಿನಲ್ಲಿದ್ದ ಹರಿಹರ ಸಮೀಪದ ಮಲೆಬೆನ್ನೂರು ಗ್ರಾಮದ ಸದಾನಂದ ಎಂಬುವರು ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದರು. ಕ್ರೇನ್ ಮೂಲಕ ಕಾರನ್ನೂ ಮೇಲಕ್ಕೆತ್ತಲಾಯಿತು. ಆದರೆ ಪತ್ನಿಗೆ ಸಂಬಂಧಿಸಿದ 45 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಆಭರಣಗಳಿದ್ದ ಕೆಂಪು ಬಟ್ಟೆಯ ಚೀಲ ನದಿಯೊಳಗೆ ಬಿದ್ದಿತ್ತು.
ಮುಳುಗುತಜ್ಞ ಈಶ್ವರ ಮಲ್ಪೆ ಅವರಿಗೆ ಸದಾನಂದ ಕರೆ ಮಾಡಿ, ನದಿಯಲ್ಲಿ ಬಿದ್ದಿರುವ ಚಿನ್ನದ ಆಭರಣ ಹುಡುಕಿಕೊಡಬಹುದೇ? ಎಂದು ವಿನಂತಿಸಿದ್ದರು. ಸ್ಥಳಕ್ಕಾಗಮಿಸಿದ ಈಶ್ವರ್ ಮಲ್ಪೆ, ಕಾರು ಬಿದ್ದಿದ್ದ ಸ್ಥಳಕ್ಕೆ ಬ್ಯಾಟರಿಯೊಂದಿಗೆ ಇಳಿದು ಹುಡುಕಾಟ ನಡೆಸಿದರು. ಮಳೆಯಿಂದಾಗಿ ನದಿ ನೀರು ಕೆಂಪುಮಯವಾಗಿತ್ತು. ಹುಡುಕಾಟಕ್ಕೆ ತುಸು ತೊಂದರೆಯಾದರೂ ನದಿಯ ಅಳದಲ್ಲಿ ಬಿದ್ದಿದ್ದ ಆಭರಣವಿದ್ದ ಚೀಲವನ್ನು ಕೇವಲ 15 ನಿಮಿಷದಲ್ಲಿ ಪತ್ತೆ ಮಾಡಿ ಮೇಲಕ್ಕೆ ತಂದು ಮಾಲೀಕರಿಗೆ ಹಸ್ತಾಂತರಿಸಿದರು.