ಭೋಪಾಲ್: ಬಕ್ರೀದ್ ಹಬ್ಬಕ್ಕೆಂದು ತರಲಾಗಿದ್ದ ಆಡಿನ ಮರಿಯ ಮಾಲೀಕತ್ವದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದ ರೆವಾ ಜಿಲ್ಲೆಯಲ್ಲಿ ನಡೆದಿದೆ.
ಸಂಜಯ್ ಖಾನ್ ಹಾಗೂ ಶಾರುಖ್ ಖಾನ್ ಎಂಬ ಇಬ್ಬರು ವ್ಯಕ್ತಿಗಳು ಮೇಕೆಯ ಮಾಲೀಕತ್ವದ ವಿಚಾರವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಇವರಿಬ್ಬರ ಸಮಸ್ಯೆಯಿಂದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಹತೇಂದ್ರನಾಥ್ ಶರ್ಮಾ ಕಳೆದ ಆರು ತಿಂಗಳಿನಿಂದ ತಾನು ಬೆಳೆಸಿದ ಆಡು ಕಳೆದ ಆರು ತಿಂಗಳಿನಿಂದ ಕಾಣೆಯಾಗಿತ್ತು ಎಂದು ಸಂಜಯ್ ಖಾನ್ ಹೇಳಿದ್ದಾರೆ. ಇತ್ತ ಶಾರುಖ್ ಖಾನ್ ಬಕ್ರೀದ್ ಹಬ್ಬಕ್ಕೆ ಬಲಿ ಕೊಲಡಲೆಂದು ತಾನು 15 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದಾಗಿ ತಿಳಿಸಿದ್ಧಾರೆ.
ಇಬ್ಬರಿಗೂ ಆಡಿನ ಫೋಟೋವನ್ನು ಠಾಣೆಗೆ ಸಲ್ಲಿಸುವಂತೆ ಹೇಳಿದ್ದೆವು. ಅದರಂತೆ ಮಾರನೇ ದಿನ ಶಾರುಖ್ ಹಾಗೂ ಸಂಜಯ್ ಇಬ್ಬರು ಆಡಿನ ಫೋಟೋವನ್ನು ಸಲ್ಲಿಸಿದ್ದು, ಎರಡು ಚಿತ್ರಗಳು ಒಂದೇ ರೀತಿ ಇದ್ದಿದ್ದರಿಂದ ಪ್ರಕರಣ ಮತ್ತಷ್ಟು ಜಟಿಲವಾಯಿತು.
ಆಡನ್ನು ಠಾಣೆಯಲ್ಲಿ ಇರಿಸಿಕೊಂಡಿದ್ದ ಕಾರಣ ದೈನಂದಿನ ಕೆಲಸಗಳಿಗೆ ಹಾಗೂ ದಿನಂಪ್ರತಿ ಆಹಾರಕ್ಕೆ ತೊಂದರೆಯಾಗುತ್ತಿತ್ತು. ವ್ಯಾಜ್ಯವನ್ನು ಪರಿಹರಿಸುವಂತೆ ಸ್ಥಳೀಯ ಕಾರ್ಪೋರೇಟರ್ ಒಬ್ಬರಿಗೆ ವಹಿಸಲಾಯಿತು. ಅದರಂತೆ ಶಾರುಖ್ ಹಾಗೂ ಸಂಜಯ್ ಇಬ್ಬರನ್ನು ಸಹ ಠಾಣೆಗೆ ಕರೆಸಿ ಮಾತನಾಡಿಸಲಾಯಿತು.
ರಾಜಿ ಸಂಧಾನದ ಪ್ರಕಾರ ಆಡನ್ನು ಸಂಜಯ್ ಇಟ್ಟುಕೊಳ್ಳಬೇಕಾಗಿದ್ದು, ಅದಕ್ಕೆ ಯಾವುದೇ ಹಾನಿ ಮಾಡದಂತೆ ಇಬ್ಬರಿಂದಲೂ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಆಡಿನ ವ್ಯವಹಾರಕ್ಕೆ ಪತ್ರ ಇಲ್ಲದಿರುವುದರಿಂದ ಸಮಸ್ಯೆ ಬಗೆಹರಿಸಲು ಕಷ್ಟವಾಯಿತು ಎಂದು ಪೊಲೀಸ್ ಅಧಿಕಾರಿ ಹತೇಂದ್ರನಾಥ್ ಶರ್ಮಾ ತಿಳಿಸಿದ್ದಾರೆ.