ಸಿಎಂ ವಿಜಯ್ ಗೆ ಗಿಫ್ಟ್ ನೀಡಿದ ವೆಂಕಟ್ ಪ್ರಭು 
ನ್ಯೂಸ್

‘ಗೋಟ್’ಗೆ ಪ್ಲೇಟ್ ಗಿಫ್ಟ್​!: ಚಿತ್ರದಲ್ಲಿ ಬಳಸಿದ್ದ ಕಾರ್ ನಂಬರ್ ಪ್ಲೇಟ್ ಉಡುಗೊರೆ ನೀಡಿದ ನಿರ್ದೇಶಕ

ಪ್ರಮುಖ ಮುಖ್ಯಾಂಶಗಳು

  • ಎರಡು ವರ್ಷದ ಹಿಂದೆ ಸಿಎಂ ಆಗುತ್ತಾರೆ ಎಂಬ ಮುನ್ಸೂಚನೆ
  • ಗೋಟ್ ಚಿತ್ರದಲ್ಲಿ ಸಿಎಂ 2026 ನಂಬರ್ ಪ್ಲೇಟ್ ಬಳಕೆ
  • ವಿಶೇಷ ನಂಬರ್ ಪ್ಲೇಟ್ ಸಿಎಂ ಗೆ ಉಡುಗೊರೆ ನೀಡಿದ ಚಿತ್ರತಂಡ
ನಟ ವಿಜಯ್ ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಪಕ್ಷದ ಮೂಲಕ ಸ್ಪರ್ಧಿಸುವುದಾಗಿ ಎರಡು ವರ್ಷಗಳ ಹಿಂದೆಯೇ ವಿಜಯ್ ಘೋಷಿಸಿದ್ದರು. ಅದರ ನಡುವೆಯೂ ಅವರು ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಅದರಲ್ಲೊಂದು ‘ದ ಗ್ರೇಟೆಸ್ಟ್ ಆಫ್​ ಆಲ್ ಟೈಮ್’ (ಗೋಟ್). ಈ ಚಿತ್ರದಲ್ಲಿ ಬಳಕೆ ಮಾಡಿದ್ದ ಕಾರಿನ ನಂಬರ್ ಪ್ಲೇಟ್, ವಿಜಯ್ ಸಿಎಂ ಆದ ಬಳಿಕ ಹೆಚ್ಚು ವೈರಲ್ ಆಗಿತ್ತು. ಅದಕ್ಕೆ ಕಾರಣ ವೆಂಕಟ್ ಪ್ರಭು ನಿರ್ದೇಶನದ ‘ದ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (2024) ಚಿತ್ರದಲ್ಲಿ ವಿಜಯ್ ‘ಟಿಎನ್ 07 ಸಿಎಂ 2026’ ನಂಬರ್ ಕಾರು ಬಳಸಿದ್ದರು. ಕಾಕತಾಳೀಯ ಕಾರಿನ ನಂಬರ್ ಸೂಚಿಸಿದಂತೆಯೇ 2026ಕ್ಕೆ ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅದೃಷ್ಟದ ಆ ನಂಬರ್ ಪ್ಲೇಟ್ ಮೇಲೆ ವಿಜಯ್ ಒಲವು ತೋರಿದ್ದರು ಎನ್ನಲಾಗಿತ್ತು. ಇದೀಗ ವೆಂಕಟ್ ಪ್ರಭು ಅದನ್ನು ವಿಜಯ್‌ಗೆ ಉಡುಗೊರೆಯಾಗಿ ನೀಡಿ, ಶುಭ ಕೋರಿದ್ದಾರೆ. ‘ಇತಿಹಾಸ ನಿರ್ಮಾಣವಾಗಿದೆ. ಅಂದುಕೊಂಡಿದ್ದನ್ನು ಸಾಧಿಸಿದ ಸಿಎಂ ವಿಜಯ್ ಅವರನ್ನು ಭೇಟಿ ಮಾಡಿ, ‘ಗೋಟ್’ ಚಿತ್ರದ ಮೊದಲ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದೆ’ ಎಂದು ಖುಷಿ ಹಂಚಿಕೊಂಡಿದ್ದಾರೆ.-ಏಜೆನ್ಸೀಸ್

ವಿಜಯ್ ಮೇಲೆ ವಿಶಾಲ್ ಬೇಸರ

ವಿಜಯ್ ಮೇಲೆ ತಮಿಳು ನಟ ವಿಶಾಲ್ ಮುನಿಸಿಕೊಂಡಿದ್ದಾರೆ. ಇತ್ತೀಚೆಗೆ ಹಾಸ್ಯನಟ, ಶಾಸಕ ರಾಜಮೋಹನ್ ಅವರಿಗೆ ವಿಜಯ್ ಸಂಪುಟದಲ್ಲಿ ‘ಫಿಲಂ ಟೆಕ್ನಾಲಜಿ ಮತ್ತು ಸಿನಿಮಾಟೋಗ್ರಫಿ ಆ್ಯಕ್ಟ್’ ಅರ್ಥಾತ್ ತಮಿಳು ಚಿತ್ರರಂಗಕ್ಕೆ ಸಂಬಂಧಿಸಿದ ಖಾತೆ ನೀಡಲಾಗಿದೆ. ಈಗಾಗಲೇ ಅವರಿಗೆ ‘ಶಾಲಾ ಶಿಕ್ಷಣ ಮತ್ತು ತಮಿಳು ಅಭಿವೃದ್ಧಿ’ ಇಲಾಖೆ ನೀಡಲಾಗಿದ್ದು, ಅದರ ಜತೆಗೆ ಹೆಚ್ಚುವರಿಯಾಗಿ ಈ ಖಾತೆ ನೀಡಲಾಗಿದೆ. ಅದಕ್ಕೆ ವಿಶಾಲ್ ಆಕ್ಷೇಪಿಸಿ, ‘ಸಿನಿಮಾದ ಬಗ್ಗೆ ಜ್ಞಾನದ ಇರದ ವ್ಯಕ್ತಿಗೆ ಖಾತೆ ನೀಡಿರುವುದು ಸಲ್ಲ’ ಎಂದು ವಿರೋಧಿಸಿದ್ದಾರೆ. ಈ ಮಧ್ಯೆ, ನಟ, ನಿರ್ದೇಶಕ ರಾಘವ್ ಲಾರೆನ್ಸ್, ನಿರ್ಮಾಪಕ ಟಿ. ಶಿವ ವಿಜಯ್ ನಿರ್ಧಾರವನ್ನು ಬೆಂಬಲಿಸಿ, ‘ರಾಜಮೋಹನ್ ಆಯ್ಕೆ ಸೂಕ್ತವಾದುದು’ ಎಂದಿದ್ದಾರೆ. ರಾಜಮೋಹನ್ ತಮಿಳಿನ ‘ನಾನ್ ಸಿರಿತಲ್’ ಸೇರಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.