ಬೆಂಗಳೂರು: ಬೇರೊಂದು ರಾಜ್ಯ ಸರ್ಕಾರದ ನಿಯೋಗ ಮತ್ತೊಂದು ಸರ್ಕಾರದ ಬಳಿಗೆ ನಿರಾವರಿ ಯೋಜನೆ, ಗಡಿ, ಸಾರಿಗೆ ಸಮಸ್ಯೆ ಇತ್ಯಾದಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಹಕಾರ ಕೋರುವುದು ಸಾಮಾನ್ಯ.
ಆದರೆ, ವಿಕಾಸಸೌಧದಲ್ಲಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ಗೋವಾದ ಅರಣ್ಯ ಸಚಿವರ ನಿಯೋಗ ಭೇಟಿ ಮಾಡಿ ತಮ್ಮ ರಾಜ್ಯದಲ್ಲಿ ಉಪಟಳ ನೀಡುತ್ತಿರುವ ಓಂಕಾರ ಪುಂಡಾನೆಯನ್ನು ಸೆರೆ ಹಿಡಿಯಲು ಸಹಕಾರ ನೀಡುವಂತೆ ಮನವಿ ಮಾಡಿರುವುದು ಎಲ್ಲರ ಗಮನಸೆಳೆದಿದೆ.
ಗೋವಾ ಅರಣ್ಯ ಸಚಿವ ವಿಶ್ವಜಿತ್ ರಾಣೆ ನಿಯೋಗದೊಂದಿಗೆ ನಡೆದ ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರ ಖಂಡ್ರೆ, ಅಭಿವೃದ್ಧಿ ಮತ್ತು ಮೂಲಸೌಕರ್ಯ ವಿಚಾರದಲ್ಲಿ ನೆರೆ ರಾಜ್ಯಗಳು ಪರಸ್ಪರ ಔದಾರ್ಯದಿಂದ ಇರಬೇಕು ಎಂದರು.
ಗೋವಾದಲ್ಲಿ ಶೇ.60 ಅರಣ್ಯ ಪ್ರದೇಶ ಇದ್ದರೂ ಆನೆ ಸಮಸ್ಯೆ ಇರಲಿಲ್ಲ. ಈಗ ಓಂಕಾರ ಪುಂಡಾನೆ ಉಪಟಳ ನೀಡುತ್ತಿದ್ದು, ಬೆಳೆ ಹಾನಿ ಆಗುತ್ತಿದೆ. ಸೆರೆಗೆ ತರಬೇತಿ ಪಡೆದ ಕುಮ್ಕಿ ಆನೆಗಳು ಮತ್ತು ತಜ್ಞರನ್ನು ಕಳುಹಿಸಿ ಸಹಕಾರ ನೀಡುವಂತೆ ಗೋವಾ ಸರ್ಕಾರ ಮನವಿ ಮಾಡಿದೆ ಎಂದರು.
ಆನೆ ಸೆರೆ ಕಾರ್ಯಾಚರಣೆಯ ಪ್ರಾವೀಣ್ಯತೆ ರಾಜ್ಯದ ಅರಣ್ಯ ಇಲಾಖೆಗೆ ಇದೆ. ನಮ್ಮಲ್ಲಿ ಪಳಗಿಸಿದ ಕುಮ್ಕಿ ಆನೆಗಳು ಇವೆ.ಗೋವಾ ಮನವಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಲಾಗುತ್ತದೆ. ಗೋವಾ ಅರಣ್ಯ ಪ್ರದೇಶ ಮಹಾರಾಷ್ಟ್ರ ಗಡಿಯನ್ನು ಹಂಚಿಕೊಂಡಿರುವ ಕಾರಣ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೂ ಆನೆ ಸೆರೆ ಹಿಡಿಯಲು ಬಗ್ಗೆ ಚರ್ಚಿಸುವ ಅಗತ್ಯ ಇದೆ ಎಂದು ಈಶ್ವರ ಬಿ. ಖಂಡ್ರೆ ತಿಳಿಸಿದರು.
ನೆರೆಯ ರಾಜ್ಯದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಸಲುವಾಗಿ ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಅರಣ್ಯ ಸಚಿವರೊಂದಿಗೆ ಸಭೆ ನಡೆಸಲಾಗಿದೆ. ಮಾನವ-ಆನೆ ಸಂಘರ್ಷ ಕುರಿತಂತೆ ಅಂತಾರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ದಸರಾ ಹಬ್ಬ ನಡೆಯುತ್ತಿದ್ದು, ವಿಜಯದಶಮಿ ಬಳಿಕ ಗೋವಾದ ಕಾನನದಲ್ಲಿ ಕಾರ್ಯಾಚರಣೆ ನಡೆಸಲಾಗುವುದು. ಗೋವಾ ರಾಜ್ಯಕ್ಕೆ ಪುಂಡಾನೆ ಹಿಡಿಯಲು ಸಹಕಾರ ನೀಡುತ್ತೇವೆಯೇ ಹೊರತು ಕುಮ್ಕಿ ಆನೆಗಳನ್ನು ನೀಡುತ್ತಿಲ್ಲ ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ, ಆನೆ ಯೋಜನೆಯ ಎಪಿಸಿಸಿಎಫ್ ಮನೋಜ್ ರಾಜನ್ ಮತ್ತಿತರರು ಇದ್ದರು.
ನೈಪುಣ್ಯತೆ ಇಲ್ಲ
ಇದೇ ವೇಳೆ ಮಾತನಾಡಿದ ಗೋವಾ ಅರಣ್ಯ ಸಚಿವ ವಿಶ್ವಜಿತ್ ರಾಣೆ, ಕರ್ನಾಟಕ ಅರಣ್ಯ ಇಲಾಖೆ ಆನೆ ಸೆರೆ ಕಾರ್ಯಚರಣೆಯಲ್ಲಿ ನೈಪುಣ್ಯತೆ ಹೊಂದಿದೆ. ಗೋವಾ ಪುಟ್ಟ ರಾಜ್ಯ. ಓಂಕಾರ ಪುಂಡಾನೆ ಸೆರೆಗೆ ಸಹಕಾರ ನೀಡುವ ಭರವಸೆ ನೀಡಿರುವ ಕರ್ನಾಟಕ ಮತ್ತು ಸಚಿವರಿಗೆ ಧನ್ಯವಾದಗಳು. ಈ ಸಂಬಂಧ ಕರ್ನಾಟಕದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳುವ ಕುರಿತು ಚರ್ಚಿಸಲಾಯಿತು. ಮಹಾರಾಷ್ಟ್ರ ಮುಖ್ಯಮಂತ್ರಿ ಜತೆಗೂ ಇದೇ ವಿಷಯ ತಿಳಿದು ಮಾತನಾಡುತ್ತೇವೆ ಎಂದರು.