ಪಣಜಿ: ಬಾಡಿಗೆಗೆ ಕಾರು ಪಡೆದ ಪ್ರವಾಸಿಗನೊಬ್ಬ ಅದನ್ನು ಗೋವಾದ ಬೀಚ್‍ನಲ್ಲಿ ಮುಳುಗಿಸಿ ಹುಚ್ಚಾಟ ಮೆರೆದಿದ್ದಾನೆ. ದೆಹಲಿ ಮೂಲದ ಲಲಿತ್ ಕುಮಾರ್ ದಯಾಳ್ ಎಂಬಾತನೇ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿ ಪೇಚಿಗೆ ಸಿಲುಕಿದ್ದಾನೆ.
ಬಾಡಿಗೆಗೆ ಕಾರು ಪಡೆದುಕೊಂಡಿದ್ದ ಲಲಿತ್ ಕುಮಾರ್ ಅದನ್ನು ಕಡಲ ತೀರದಲ್ಲಿ ಚಲಾಯಿಸಿ ಮೋಜು-ಮಸ್ತಿ ಮಾಡಿದ್ದಾನೆ. ಈ ವೇಳೆ ಕಾರು ನೀರಿನಲ್ಲಿ ಮುಳುಗಡೆಯಾಗಿದೆ. ಹಣಜುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೀಚ್‍ನಲ್ಲಿ ವಾಹನ ಚಲಾಯಿಸಿದ ಪ್ರವಾಸಿಗರನ್ನು ಬಂಧಿಸಿರುವ ಪೊಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಲಲಿತ್‍ಕುಮಾರ್ ಚಲಾಯಿಸುತ್ತಿದ್ದ ಕ್ರೇಟಾ ಕಾರು ಶೇಟಯೆವಾಡಾದ ಸಂಗೀತಾ ಗವಂಡಾಳಕರ್ ಗೆ ಸೇರಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಈ ಘಟನೆಯ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.
ಇದಲ್ಲದೆ ಕಾರು ಮಾಲೀಕರಾದ ಸಂಗೀತಾ ಗಾವಡಾಳ್ಕರ್ ವಿರುದ್ಧ ಮಾಪುಸಾದ ಪೊಲೀಸರು ಆರ್‌ಟಿಒಗೆ ವರದಿ ಸಲ್ಲಿಸಿದ್ದಾರೆ. ಗೋವಾದ ಕಡಲತೀರಗಳಲ್ಲಿ ವಾಹನ ಚಲಾವಣೆ ನಿಷೇಧಿಸಲಾಗಿದೆ. ಆದರೆ, ಹೊರಗಿನ ಪ್ರವಾಸಿಗರು ನಿಷೇಧಿತ ಪ್ರದೇಶಗಳಲ್ಲಿ ವಾಹನ ಚಲಾಯಿಸಿ ಹುಚ್ಚಾಟ ಮೆರೆಯುತ್ತಿದ್ದಾರೆ.