ಗೋವಾ: ವಾಸ್ಕೋ ನಿಜಾಮುದ್ದಿನ ರೈಲಿನಲ್ಲಿ ಗೋವಾದಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ 8 ಜನ ಯುವಕರು ವಿಷಾಹಾರ ಸೇವಿಸಿ ಸೋಮವಾರ ತಡರಾತ್ರಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರ ಪ್ರದೇಶದಿಂದ ಗೋವಾಕ್ಕೆ ಉದ್ಯೋಗ ಅರೆಸಿ ಬಂದಿದ್ದ ಯುವಕರು ಗೋವಾದಲ್ಲಿ ಊಟ ಮಾಡಿ ವಾಸ್ಕೋ- ನಿಜಾಮುದ್ದಿನ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಬೆಳಗಾವಿಗೆ ರೈಲು ಬರುತ್ತಿದ್ದಂತೆ ಅಸ್ವಸ್ಥರಾದ ಇವರನ್ನು ಕೂಡಲೇ ರೈಲ್ವೆ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
8 ಜನರ ಪೈಕಿ 6 ಜನ ಯುವಕರು ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದು, ಇಬ್ಬರು ಯುವಕರು ತೀವ್ರ ಅಸ್ವಸ್ಥಗೊಂಡಿದ್ದಾರೆ. ವಿಷಾಹಾರ ಸೇವಿಸಿದ ಎಲ್ಲರೂ ಉತ್ತರ ಪ್ರದೇಶದ ಝಾನ್ಸಿ ಮೂಲದವರೆಂದು ತಿಳಿದು ಬಂದಿದೆ.
ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಇವರು ಮರಳಿ ವಾಸ್ಕೋ- ನಿಜಾಮುದ್ದೀನ್ ರೈಲಿನಲ್ಲಿ ತಮ್ಮ ಊರಿಗೆ ತೆರಳುತ್ತಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆಗೆ ನಗರ ಪೊಲೀಸ್ ಅಧಿಕಾರಿಗಳು, ರೈಲ್ವೆ ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿದರು.