ನ್ಯೂಸ್

ಜಾಗತಿಕ ಪ್ರವೃತ್ತಿ ಆಶಾದಾಯಕ: 1% ಜಿಗಿಯಿತು ಷೇರು ಸೂಚ್ಯಂಕ; ಹೂಡಿಕೆದಾರರಿಗೆ ರೂ. 3.1 ಲಕ್ಷ ಕೋಟಿ ಲಾಭ

ಮುಂಬೈ: ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇನ್ಫೋಸಿಸ್‌ನಲ್ಲಿ ಖರೀದಿ ಹಾಗೂ ಅಮೆರಿಕ ಮತ್ತು ಏಷ್ಯಾ ಮಾರುಕಟ್ಟೆಗಳಲ್ಲಿನ ರ್ಯಾಲಿಯಿಂದಾಗಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಬಿಎಸ್​ಇ ಮತ್ತು ನಿಫ್ಟಿ ಗುರುವಾರ ಅಂದಾಜು 1 ಪ್ರತಿಶತದಷ್ಟು ಏರಿಕೆ ಕಂಡಿವೆ.

ಹೆಚ್ಚು ಏರಿಳಿತ ಕಂಡ ವಹಿವಾಟಿನಲ್ಲಿ, 30-ಷೇರುಗಳ ಬಿಎಸ್‌ಇ ಸೂಚ್ಯಂಕ 676.69 ಅಂಕಗಳು ಅಥವಾ ಶೇಕಡಾ 0.93 ರಷ್ಟು ಏರಿಕೆಯಾಗಿ 73,663.72 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ಸಮಯದಲ್ಲಿ ಇದು ಗರಿಷ್ಠ 73,749.47 ಮತ್ತು ಕನಿಷ್ಠ 72,529.97 ಅಂಕಗಳನ್ನು ಮುಟ್ಟಿತ್ತು.

ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 203.30 ಅಂಕಗಳು ಅಥವಾ ಶೇಕಡಾ 0.92 ರಷ್ಟು ಏರಿಕೆಯಾಗಿ 22,403.85 ಕ್ಕೆ ತಲುಪಿತು.

"ದೇಶೀಯ ಮಾರುಕಟ್ಟೆಯಲ್ಲಿ ತಡವಾಗಿ ಏರಿಕೆ ಕಂಡುಬಂದಿತು. ಬಲವಾದ ಜಾಗತಿಕ ಪ್ರವೃತ್ತಿಗಳು ಇದಕ್ಕೆ ಕಾರಣ. ಅಮೆರಿಕ ಗ್ರಾಹಕ ಹಣದುಬ್ಬರ ಅಂಕಿಅಂಶಗಳು ನಿರೀಕ್ಷೆಗಿಂತ ಕಡಿಮೆಯಾಗಿದೆ. ಇದು 2024 ರಲ್ಲಿ ಕನಿಷ್ಠ ಎರಡು ಬಡ್ಡಿ ದರ ಕಡಿತಗಳನ್ನು ಸೂಚಿಸುತ್ತದೆ" ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಪ್ರಮುಖ ಷೇರುಗಳ ಪೈಕಿ ಮಹೀಂದ್ರಾ ಆ್ಯಂಡ್​ ಮಹೀಂದ್ರಾ, ಭಾರ್ತಿ ಏರ್‌ಟೆಲ್, ಟೆಕ್ ಮಹೀಂದ್ರಾ, ಟೈಟಾನ್, ಇನ್ಫೋಸಿಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಬ್ಯಾಂಕ್, ಲಾರ್ಸನ್ ಆ್ಯಂಡ್ ಟೂಬ್ರೊ, ಕೊಟಕ್ ಮಹೀಂದ್ರಾ ಬ್ಯಾಂಕ್ ಲಾಭ ಗಳಿಸಿದವು. ಮಾರುತಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪವರ್ ಗ್ರಿಡ್, ಟಾಟಾ ಮೋಟಾರ್ಸ್, ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಕುಸಿತ ಕಂಡವು.

ಏಷ್ಯಾದ ಮಾರುಕಟ್ಟೆಗಳ ಪೈಕಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್​ಕಾಂಗ್ ಲಾಭ ಕಂಡವು. ಐರೋಪ್ಯ ಮಾರುಕಟ್ಟೆಗಳು ಕಡಿಮೆ ವಹಿವಾಟು ನಡೆಸಿದವು. ಅಮೆರಿಕದ ವಾಲ್ ಸ್ಟ್ರೀಟ್ ಬುಧವಾರ ಲಾಭ ದಾಖಲಿಸಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 2,832.83 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ಕೇಂದ್ರ ತಿಳಿಸಿದೆ.

ತನ್ನ ಮೂರು ದಿನಗಳ ಏರುಗತಿಯಿಂದ ಹಿಮ್ಮೆಟ್ಟಿದ 30-ಷೇರುಗಳ ಬಿಎಸ್‌ಇ ಸೂಚ್ಯಂಕ ಬುಧವಾರ 117.58 ಅಂಕಗಳಷ್ಟು ಕುಸಿದು 72,987.03 ಕ್ಕೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 17.30 ಅಂಕಗಳಷ್ಟು ಕುಸಿದು 22,200.55 ಕ್ಕೆ ಮುಟ್ಟಿತ್ತು.

ವಲಯವಾರು ಸೂಚ್ಯಂಕಗಳು:

ನಿಫ್ಟಿ ಪಿಎಸ್‌ಯು ಬ್ಯಾಂಕ್ (ಶೇ. 0.88 ರಷ್ಟು ಇಳಿಕೆ) ಹೊರತುಪಡಿಸಿ, ಇತರೆಲ್ಲ ವಲಯದ ಸೂಚ್ಯಂಕಗಳು ಗುರುವಾರ ಏರಿಕೆ ದಾಖಲಿಸಿದವು. ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ (ಶೇ. 1.72), ಐಟಿ (ಶೇ. 1.66), ರಿಯಾಲ್ಟಿ (ಶೇ. 1.63), ಮೀಡಿಯಾ (ಶೇ. 1.22) ಮತ್ತು ಹಣಕಾಸು ಸೇವೆಗಳು (ಶೇ. 1.09) ಗಮನಾರ್ಹ ಲಾಭ ಕಂಡವು.

ಹೂಡಿಕೆದಾರರಿಗೆ ರೂ. 3.1 ಲಕ್ಷ ಕೋಟಿ ಲಾಭ:
ಬಿಎಸ್​ಇಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಬುಧವಾರದ ವಹಿವಾಟಿನ ಅಂದಾಜು ರೂ. 404.3 ಲಕ್ಷ ಕೋಟಿಗಳಿಂದ ಗುರುವಾರ ಅಂದಾಜು ರೂ. 407.4 ಲಕ್ಷ ಕೋಟಿಗೆ ಜಿಗಿಯಿತು. ಈ ಒಂದೇ ದಿನದಲ್ಲಿ ಹೂಡಿಕೆದಾರರು ಅಂದಾಜು ರೂ. 3.1 ಲಕ್ಷ ಕೋಟಿಗಳಷ್ಟು ಶ್ರೀಮಂತರಾದರು.