ಮುಂಬೈ: ಮಹಾರಾಷ್ಟ್ರದ ಸೊಲ್ಲಾಪುರದ ಸರ್ಕಾರಿ ಶಾಲೆಯೊಂದರ ಶಿಕ್ಷಕ ರಂಜಿತ್ ಸಿಂಗ್ ಡಿಸಾಲೆ ಅವರು ಗ್ಲೋಬಲ್ ಟೀಚರ್ ಪ್ರಶಸ್ತಿಗೆ ಭಾಜೀನರಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ಸಂಗತಿ. ಜಾಗತಿಕ ಮಟ್ಟದಲ್ಲಿ ಪ್ರಶಸ್ತಿ ಪಡೆದ ಬೆನ್ನಲ್ಲೇ ಇನ್ನೊಂದು ಅವಕಾಶ ರಂಜಿತ್ ಅವರಿಗೆ ಒದಗಿಬಂದಿದೆ. ರಂಜಿತ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಬಿಜೆಪಿ ಮುಂದಾಗಿದೆ.
ಇದನ್ನೂ ಓದಿ: ‘ಗಂಡಿನ ಬದಲು ಹೆಣ್ಣಾಗಿದೆ, ತಿಂಗ್ಳಿಗೆ 30 ಸಾವಿರ ಕೊಡಿ’; ವಿಚಿತ್ರ ಬೇಡಿಕೆ ಇಟ್ಟ ಅಳಿಯನಿಗೆ ಅತ್ತೆ ಮಾವನಿಂದ ಪಾಠ
ರಂಜಿತ್ ಸಿಂಗ್ ಅವರನ್ನು ನಾಮನಿರ್ದೇಶಿತ ಎಂಎಲ್ಸಿ ಮಾಡಲು ನಾವು ಕೇಳಿಕೊಳ್ಳುತ್ತೇವೆ. ಈ ವಿಚಾರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಮಾತನಾಡುತ್ತೇವೆ. ನಂತರ ರಾಜ್ಯಪಾಲರಿಗೆ ಪತ್ರ ಬರೆಯಲಾಗುವುದು ಎಂದು ಬಿಜೆಪಿ ನಾಯಕ ದಾರೇಕರ್ ತಿಳಿಸಿದ್ದಾರೆ. ಶನಿವಾರದಂದು ರಂಜಿತ್ ಅವರ ಮನೆಗೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದ ಅವರು ಈ ಮಾತನ್ನು ಹೇಳಿದ್ದಾರೆ. ರಂಜಿತ್ ಅವರನ್ನು ಪ್ರಶಂಸಿಸುವಂತೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡುವುದಾಗಿ ಅವರು ಹೇಳಿದ್ದಾರೆ.
ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕ್ಯೂಆರ್ ಕೋಡ್ ಪಠ್ಯಪುಸ್ತಕಗಳಲ್ಲಿ ರಂಜಿತ್ ಮಾಡಿರುವ ಸಾಧನೆ ಗುರುತಿಸಿ ಅವರಿಗೆ ಗ್ಲೋಬಲ್ ಟೀಚರ್ ಅವಾರ್ಡ್ ನೀಡಲಾಗಿದೆ. ಪ್ರಶಸ್ತಿಯಾಗಿ 1 ಮಿಲಿಯನ್ ಅಮೆರಿಕನ್ ಡಾಲರ್ ನೀಡಲಾಗಿದೆ. ಈ ಹಣದಲ್ಲಿ ಅರ್ಧ ಭಾಗವನ್ನು ಫೈನಲ್ ನಲ್ಲಿದ್ದ ಇತರ 9 ಶಿಕ್ಷಕರಿಗೆ ಹಂಚುವ ಮೂಲಕ 31 ವರ್ಷದ ರಂಜಿತ್ ಸಿಂಗ್ ಡಿಸಾಲೆ ಉದಾರತೆ ಮೆರೆದಿದ್ದಾರೆ. (ಪಿಟಿಐ)