ನವದೆಹಲಿ: ಕರೊನಾ ವೈರಸ್ ಭಾರತದಲ್ಲಿ ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 106 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1024ಕ್ಕೆ ಏರಿದೆ. ಮೃತಪಟ್ಟವರು 27 ಮಂದಿ.
ಲಾಕ್ಡೌನ್ ಆಗಿದ್ದರೂ ಜನರ ಓಡಾಟವೂ ನಿಂತಿಲ್ಲ. ಕರೊನಾ ಹರಡುವಿಕೆಯ ಪ್ರಮಾಣವೂ ಕಡಿಮೆ ಆಗುತ್ತಿಲ್ಲ. ಹಾಗಾಗಿ ಭಾನುವಾರ ಮತ್ತೊಮ್ಮೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಜನರು ಲಾಕ್ಡೌನ್ ಪಾಲಿಸುವಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಿ, ಎಲ್ಲ ಗಡಿಭಾಗಗಳನ್ನೂ ಬಂದ್ ಮಾಡಿ ಎಂದು ಹೇಳಿದೆ.
ಜಗತ್ತಿನಾದ್ಯಂತ ಕರೊನಾ ವೈರಸ್ ಸೋಂಕಿತರ ಸಂಖ್ಯೆ 7,22,000ಕ್ಕಿಂತಲೂ ಹೆಚ್ಚಾಗಿದ್ದು, 33,960 ಮಂದಿ ಮೃತಪಟ್ಟಿದ್ದಾರೆ. ಇದ್ದುದರಲ್ಲೇ ಸಮಾಧಾನಕೊಡುವ ಸಂಗತಿಯೆಂದರೆ 1,51,000 ಜನ ವೈರಸ್ನಿಂದ ಸಂಪೂರ್ಣ ಮುಕ್ತ ಪಡೆದು, ಗುಣಮುಖರಾಗಿದ್ದಾರೆ.
ಭಾರತದಲ್ಲೂ ಕೂಡ 87 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆದರೆ ಲಾಕ್ಡೌನ್ ನಡುವೆಯೂ ವಲಸೆ ಕಾರ್ಮಿಕರು ದಂಡುದಂಡಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುತ್ತಿರುವುದು ಸದ್ಯದ ಆತಂಕ. (ಏಜೆನ್ಸೀಸ್)