ನ್ಯೂಸ್

ಶಿಗ್ಗಾವ್ ಉಪ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡಿ; ನಿಯೋಗದಿಂದ ಬೇಡಿಕೆ

ಬೆಂಗಳೂರು: ಮೂರು ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಒಂದು ಸ್ಥಾನದಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆ ನಡೆಯುತ್ತಿರುವ ನಡುವೆಯೇ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಪಕ್ಷದ ವೇದಿಕೆಯಲ್ಲಿ ಒತ್ತಾಯ ತರಲು ಮುಂದಾಗಿದೆ.

ಬುಧವಾರ ವಿಧಾನಸೌಧದಲ್ಲಿ ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಅವರನ್ನು ಭೇಟಿ ಮಾಡಿದ್ದ ನಿಯೋಗವು, ಶಿಗ್ಗಾವ್ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಸ್ಪರ್ಧಿಸಲು ಅವಕಾಶ ಕೊಡಬೇಕೆಂದು ಒತ್ತಾಯಿಸಿತು. ಜತೆಗೆ ಪಕ್ಷದ ಸಭೆಯಲ್ಲಿ ತಮ್ಮ ಬೇಡಿಕೆಯನ್ನು ಮಂಡಿಸುವಂತೆ ಆಗ್ರಹಿಸಿತು.

ಶಿಗ್ಗಾವ್‌ನಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಜತೆಗೆ ಈ ಕ್ಷೇತ್ರವನ್ನು ಕಾಂಗ್ರೆಸ್ ಕೈ ವಶ ಮಾಡಿಕೊಳ್ಳಲು ಅವಕಾಶ ಬಂದಿದೆ. ಹೀಗಾಗಿ ಅರ್ಹ ಅಲ್ಪಸಂಖ್ಯಾತ ಮುಖಂಡರಿಗೆ ಅವಕಾಶ ಕೊಡಬೇಕೆಂಬುದು ನಮ್ಮ ಒತ್ತಾಯ ಎಂದು ನಿಯೋಗ ತಿಳಿಸಿತು.

ಜತೆಗೆ ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆ ತಿದ್ದುಪಡಿ ವಿಷಯದಲ್ಲಿ ಸ್ಪಷ್ಟತೆ ಮಾಡಿಕೊಂಡು ಮುಸ್ಲಿಂ ಸಮುದಾಯಕ್ಕೆ ಯಾವುದೇ ರೀತಿ ಅನ್ಯಾಯವಾಗದಂತೆ ಪಕ್ಷ ಹಾಗೂ ಸರ್ಕಾರ ನಿಲುವು ತೋರಬೇಕು ಎಂದು ಒತ್ತಾಯಿಸಿತು.

ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ನ ಪ್ರಧಾನ ಕಾರ್ಯದರ್ಶಿ ಶಾಹಿದ್ ಸೇರಿ ಸಮುದಾಯದ ಪ್ರಮುಖರು ನಿಯೋಗದಲ್ಲಿದ್ದು, ಅಲ್ಪಸಂಖ್ಯಾತ ಸಮುದಾಯದ ಅನೇಕ ವಿಚಾರಗಳ ಕುರಿತಂತೆ ಚರ್ಚಿಸಿದರು.