ನ್ಯೂಸ್

ತಲ್ವಾರ್‌ಗೆ ಪ್ರತಿಯಾಗಿ ತ್ರಿಶೂಲ ಕೊಡಿ, ಬಿಜೆಪಿ ಸಂಸದ ಬೇಡಿಕೆ !

ಬೆಂಗಳೂರು: ಕೋಲಾರ ನಗರದ ಕ್ಲಾಕ್ ವೃತ್ತದ ಬಳಿ ತಲ್ವಾರ್ ಮಾದರಿ ಸ್ವಾಗತ ದ್ವಾರ ನಿರ್ಮಿಸಿದ್ದಕ್ಕೆ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಕೆಂಡಾಮಂಡಲವಾಗಿದ್ದು, ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಹಿಂದು ಸಮುದಾಯದವರಿಗೂ ತ್ರಿಶೂಲ ಹಾಕಲು ಅವಕಾಶ ಕೊಡಿ ಎಂಬ ಬೇಡಿಕೆಯಿಟ್ಟಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಪರವಾನಗಿ ನೀಡಲು ನೂರೆಂಟು ಷರತ್ತುಗಳಿವೆ. ಆದರೆ ಹೀಗೆ ರಾತೋರಾತ್ರಿ ತಲ್ವಾರ್ ಸ್ವಾಗತ ಕಮಾನು ಕಟ್ಟಲು ಅವಕಾಶ ಕೊಟ್ಟಿದ್ದೇಕೆ ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದ ಓಲೈಕೆ ನೀತಿ, ಕೋಲಾರ ಎಸ್‌ಪಿ ಕಾಂಗ್ರೆಸ್ ಏಜೆಂಟರಂತೆ ವರ್ತನೆಯೇ ಈ ಅಕ್ರಮ ಚಟುವಟಿಕೆಗೆ ಕಾರಣವೆಂದು ಆರೋಪಿಸಿದರು.

ಅಕ್ರಮವಾಗಿ ತಲ್ವಾರ್ ಕಮಾನು ಕಟ್ಟಿ, ಕೋಮುಸೌಹಾರ್ದತೆ ಕದಡಲು ಪ್ರಯತ್ನಿಸಿದವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು. ಇದೇ ರೀತಿ ತ್ರಿಶೂಲ ಸ್ವಾಗತ ದ್ವಾರ ಕಟ್ಟಲು ಪರವಾನಗಿ ನೀಡಬೇಕು ಎಂದು ಎಸ್.ಮುನಿಸ್ವಾಮಿ ಒತ್ತಾಯಿಸಿದರು.

ಕೋಲಾರ ನಗರ ಹಲವು ವಿಶೇಷತಗಳಿಗೆ ಹೆಸರಾಗಿದೆ. ಆದರೆ ತಲ್ವಾರ್ ದ್ವಾರದಂತಹ ಕೃತ್ಯಗಳಿಂದ ಕಳಂಕ ಬರಲಿದೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಬಿಜೆಪಿಯ ಆಕ್ರೋಶ, ಹೋರಾಟದ ಎಚ್ಚರಿಕೆ ಸಂದೇಶ ರವಾನೆಯಾಗುತ್ತಲೇ ಕೋಲಾರ ಪೊಲೀಸರು ಜಾಗೃತರಾಗಿದ್ದು, ಜೆಸಿಬಿಯಿಂದ ತಲ್ವಾರ್ ಸ್ವಾಗತ ದ್ವಾರವನ್ನು ತೆರವುಗೊಳಿಸಿದ್ದಾರೆ.