ಹಿರೇನಲ್ಲೂರು ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಪುಟ್ಟಪ್ಪ, ಕುಮಾರಯ್ಯ, ನಿಜಗುಣ, ನವೀನ್ ಇತರರಿದ್ದರು. 
ನ್ಯೂಸ್

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ

ಕಡೂರು: ಕ್ಷೇತ್ರದಾದ್ಯಂತ 80 ಕೋಟಿ ರೂ. ವೆಚ್ಚದ ಜಲಜೀವನ್ ಮಿಷನ್ ಕಾಮಗಾರಿಗಳು ನಡೆಯುತ್ತಿದೆ. ಗ್ರಾಮದಲ್ಲಿ ನಡೆಯುವ ಈ ಯೋಜನೆಯ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಎಚ್ಚರ ವಹಿಸಬೇಕಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಹಿರೇನಲ್ಲೂರು ಮತ್ತು ಉಡುಗೆರೆ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಹಿರೇನಲ್ಲೂರಿನಲ್ಲಿ 80 ಲಕ್ಷ ರೂ. ಮತ್ತು ಉಡುಗೆರೆ ಗ್ರಾಮದಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಶಾಸಕರು ಅಥವಾ ಸಂಸದರು ಪ್ರತಿ ಕಾಮಗಾರಿ ಗುಣಮಟ್ಟ ವೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಗ್ರಾಪಂ ಆಡಳಿತ ಕಾಮಗಾರಿ ಪರಿಶೀಲಿಸಬೇಕು ಎಂದರು.
ಪ್ರತಿ ಗ್ರಾಮಕ್ಕೆ ಭದ್ರಾ ಕುಡಿಯುವ ನೀರನ್ನು ಜನರಿಗೆ ಒದಗಿಸಬೇಕು ಎನ್ನುವುದು ಜೆಜೆಎಂ ಉದ್ದೇಶ. ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಯೋಜನೆಯ ಶೀಘ್ರ ಅನುಷ್ಠಾನದ ಬಗ್ಗೆ ವೈಯಕ್ತಿಕವಾಗಿ ಆಸಕ್ತಿ ತೋರುತ್ತಿದ್ದಾರೆ. ಆಗಾಗ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸುವ ಮೂಲಕ ಕಾಮಗಾರಿಗೆ ಚುರುಕು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾಮಗಾರಿ ಶೀಘ್ರ ಪೂರ್ಣಗೊಂಡು ಜನರಿಗೆ ಸದ್ಯದಲ್ಲಿಯೇ ಶುದ್ಧ ಕುಡಿಯುವ ನೀರು ದೊರಕಲಿದೆ ಎಂದು ಹೇಳಿದರು.
ಹಿರೇನಲ್ಲೂರು ಗ್ರಾಮದ ಆಂಜನೇಯ ಸ್ವಾಮಿ ದೇವಾಲಯ ಹಾಗೂ ಮಾಕಮ್ಮ ದೇವಿ ದೇವಾಲಯದ ಅಭಿವೃದ್ಧಿಗೆ ತಲಾ 3 ಲಕ್ಷ ರೂ, ಬೀರಲಿಂಗೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ 15 ಲಕ್ಷ ರೂ. ಮಂಜೂರಾಗಿದ್ದು 5 ಲಕ್ಷ ರೂ.ನೀಡಲಾಗಿದೆ. ಗ್ರಾಮದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಬಿ.ಪುಟ್ಟಪ್ಪ, ಸದಸ್ಯರಾದ ಕುಮಾರಯ್ಯ, ಕಲ್ಪನಾ ಗಿರೀಶ್, ಪುಷ್ಪಾ ರಾಜೇಶ್, ನವೀನ್, ಮುಖಂಡರಾದ ನಿಜಗುಣ, ಎಚ್.ಸಿ.ಜಯಣ್ಣ, ನಟರಾಜ್, ಪಿಡಿಒ ಇಸ್ಮಾಯಿಲ್ ಇತರರಿದ್ದರು.