ನ್ಯೂಸ್

ಜನರ ಸಮಸ್ಯೆಗೆ ಆದ್ಯತೆ ನೀಡಿ: ಎನ್.ರವಿಕುಮಾರ್ | Cong internal fight effect on state

ಮೃತ್ಯುಂಜಯ ಕಪಗಲ್

ಬೆಂಗಳೂರು: ‘ಉತ್ತರಾಧಿಕಾರಿ’ ವಿಷಯದ ಚರ್ಚೆಯನ್ನು ಕಾಂಗ್ರೆಸ್ ಪಕ್ಷದ ಬದಿಗಿಟ್ಟು ಆಡಳಿತದ ಕಡೆಗೆ ಗಮನಹರಿಸಬೇಕು. ರಾಜ್ಯದ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ, ಅವರ ಆಶಯಗಳಿಗೆ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಸಿಎಂ ಬದಲಾವಣೆ, ಸೈದ್ಧಾಂತಿಕವಾಗಿ ಉತ್ತರಾಧಿಕಾರಿಯಾಗಲು ಯಾರು ಅರ್ಹರು ? ಎನ್ನುವುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯ. ಇದೇ ರಾಜ್ಯದ ಸಮಸ್ಯೆ ಎಂಬ ರೀತಿಯಲ್ಲಿ ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರು ಚರ್ಚೆಯಲ್ಲಿ ಮುಳುಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಅಭಿವೃದ್ಧಿ ಹಾಗೂ ಆಡಳಿತಕ್ಕೆ ವೇಗ ನೀಡಬೇಕೆಂಬ ವಿಷಯ ಬಂದಾಗಲೆಲ್ಲ ಬೇರೊಂದು ವಿಷಯ ಎತ್ತಿ ಜನರ ದಾರಿ ತಪ್ಪಿಸಲು ಹವಣಿಸಲಾಗುತ್ತಿದೆ. ಯಾರೂ ಬೇಕಾದರೂ ಮುಂದಿನ ಮುಖ್ಯಮಂತ್ರಿ, ಉತ್ತರಾಧಿಕಾರಿಯಾಗಲಿ. ಆ ಪ್ರಶ್ನೆಯೇ ನಮ್ಮ ಮುಂದಿಲ್ಲ, ಜನರ ಕಷ್ಟ-ಕಾರ್ಪಣ್ಯ, ಅಭಿವೃದ್ಧಿ ಕುರಿತ ಬೇಡಿಕೆಗಳಿಗೆ ಸ್ಪಂದಿಸಬೇಕು ಎನ್ನುವುದು ಪ್ರತಿಪಕ್ಷದ ಒತ್ತಾಯವಾಗಿದೆ ಎಂದರು.

ಸಿಎಂ ಪ್ರತಿಕ್ರಿಯೆ ಇಲ್ಲ

ಮೈಸೂರಿನಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿದ್ದು, ಡ್ರಗ್ಸ್ ್ಯಾಕ್ಟರಿಯನ್ನೇ ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿದರು. ಅಲೆಮಾರಿ ಸಮುದಾಯದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಯಿತು. ಇದೀಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳುವ ಪ್ರಕಾರ ಮೈಸೂರಿನಲ್ಲಿ ಹೆಣ್ಣು ಭ್ರೂಣಗಳ ಹತ್ಯೆ ದಂಧೆ ನಡೆಯುತ್ತಿದ್ದು, ತವರು ಜಿಲ್ಲೆಯ ಇಂತಹ ಕರಾಳ ಕೃತ್ಯಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ತುಟಿ ಬಿಚ್ಚಿಲ್ಲವೇಕೆ ? ಎಂದು ಎನ್.ರವಿಕುಮಾರ್ ಕೇಳಿದರು.

ರಾಜ್ಯದಲ್ಲಿ 2,300 ರೈತರು, ಏಳು ಜನ ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಬಳ ಬಂದಿಲ್ಲವೆಂಬ ಕಾರಣಕ್ಕೆ ಕಲಬುರಗಿ ಜಿಲ್ಲೆಯ ಗ್ರಂಥಪಾಲಕಿ, ಚಾಮರಾಜನಗರ ಜಿಲ್ಲೆ ನೀರಗಂಟಿ ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಭೀರ ಸಮಸ್ಯೆಗಳತ್ತ ಸರ್ಕಾರ ಮೊದಲು ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಸಕಾಲಕ್ಕೆ ಬಿಲ್ ಪಾವತಿಯಾಗದ ಕಾರಣ 15 ಜನ ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದು, ಬಾಕಿ ಬಿಲ್ ಹೊರೆ, 60 ಪರ್ಸೆಂಟ್ ಕಮಿಷನ್ ವಿರುದ್ಧ ಗುತ್ತಿಗೆದಾರರ ಸಂಘ ಬಹಿರಂಗವಾಗಿಯೇ ಧ್ವನಿ ಎತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಬೆಂಗಳೂರಿಗೆ ಬರಲಿದ್ದ ಎಐ ಹಬ್ ಕೈತಪ್ಪಿ ಹೋಯಿತು ಎಂದು ಎನ್.ರವಿಕುಮಾರ್ ದೂರಿದರು.