ಕೊಪ್ಪಳದಲ್ಲಿ ವಿವಿಧ ಕಾಮಗಾರಿ ಬಜೆಟ್ನಲ್ಲಿ ಸೇರಿಸಲು ಒತ್ತಾಯಿಸಿ ಜನಪರ ಸಂಟನೆಗಳ ಒಕ್ಕೂಟ ಪದಾಧಿಕಾರಿಗಳು ಶನಿವಾರ ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರ ಹಾಗೂ ಪೌರಾಯುಕ್ತ ವೆಂಕಟೇಶ ನಾಗನೂರಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಎಸ್.ಎ.ಗಫಾರ್, ಬಸವರಾಜ ಶೀಲವಂತರ, ತುಕಾರಾಮ್ ಪಾತ್ರೋಟಿ. ಚಾಂದಪಾಷಾ,ದೇವಪ್ಪ ಕಟ್ಟಿಮನಿ, ಶೇಖರ್ ದೊಡ್ಡಮನಿ ಇದ್ದರು.
- ಅಧಿಕಾರಿಗಳಿಗೆ ಜನಾಗ್ರಹ
- ನಗರಸಭೆ ಬಜೆಟ್ ಪೂರ್ವಭಾವಿ ಸಭೆ
ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳ ದಿನ ಕಳೆದಂತೆ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ಕಲ್ಪಿಸಬೇಕು. ಸುಗಮ ಸಂಚಾರ, ವೃತ್ತ ಅಗಲೀಕರ, ಹಸಿರೀಕರಣಕ್ಕೆ ಆದ್ಯತೆ ನೀಡುವಂತೆ ವಿವಿಧ ಜನರು ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿದರು. ಸ್ಪಂದಿಸಿದ ಅಧಿಕಾರಿಗಳು ಬಜೆಟ್ನಲ್ಲಿ ಸಲಹೆ ಅಳವಡಿಕೆ ಭರವಸೆ ನೀಡಿದರು.
ಮುಖ್ಯವಾಗಿ ಎಲ್ಲ ವಾರ್ಡ್ಗಳಿಗೆ ನಿಗದಿಯಂತೆ ಕುಡಿವ ನೀರು ಸರಬರಾಜು ಆಗುತ್ತಿಲ್ಲ. ಪೈಪ್ ಒಡೆದಿದೆ, ವಿದ್ಯುತ್ ಸಮಸ್ಯೆ ಇನ್ನಿತರ ಕಾರಣ ನೀಡಿ ತಡ ಮಾಡುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ. ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿಲ್ಲ. ರಸ್ತೆ ಡಾಂಬಾರೀಕರಣವಾಗುತ್ತಿಲ್ಲ. ತಗ್ಗು&ಗುಂಡಿಗಳು ಹೆಚ್ಚಿವೆ. ಬೀದಿ ನಾಯಿ ಹಾವಳಿ ನಿಯಂತ್ರಣವಾಗಿಲ್ಲ. ಹಿರಿಯ ನಾಗಕರಿಕರು, ಮಕ್ಕಳಿಗಾಗಿ ಉತ್ತಮ ಉದ್ಯಾನವಿಲ್ಲ. ಕಸ ವಿಲೇವಾರಿ ವೈಜ್ಞಾನಿಕವಾಗಿ ಆಗುತ್ತಿಲ್ಲ. ಮೊದಲು ಮೂಲ ಸೌಕರ್ಯ ಕಲ್ಪಿಸಿ. ನಂತರ ಬಾಕಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಹಲವರು ಅಭಿಪ್ರಾಯ ಮಂಡಿಸಿದರು.
ಸ್ಪಂದಿಸಿದ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಸಾರ್ವಜನಿಕರು ನೀಡಿದ ಸಲಹೆಗಳನ್ನು ಪಟ್ಟಿ ಮಾಡಲಾಗಿದೆ. ಈಗಾಗಲೇ ಕೆಲವನ್ನು ನಾವು ಅಂದಾಜು ಪಟ್ಟಿಯಲ್ಲಿ ಸೇರಿಸಿದ್ದೇವೆ. ಉಳಿದಂತೆ ನಗರದ ಸಮಗ್ರ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ರೂಪಿಸಲಾಗುವುದು. ವೃತ್ತ ಅಗಲೀಕರಣ, ಸಂಪರ್ಕ ರಸ್ತೆ, ವರ್ತುಲ ರಸ್ತೆ, ಬೀದಿ ದೀಪ ಅಳವಡಿಕೆಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಪೌರಾಯುಕ್ತ ವೆಂಕಟೇಶ ನಾಗನೂರ ಇತರರಿದ್ದರು.
ಹಸಿರೀಕರಣಕ್ಕೆ ಇರಲಿ ಆದ್ಯತೆ
ನಗರದಲ್ಲಿ ಭೂಮಿ ಒಳಗೆ ವಿದ್ಯುತ್ ಸಂಪರ್ಕ ಜಾಲವನ್ನು ವಿಸ್ತರಿಸಬೇಕು. ರಸ್ತೆ ಬದಿಗಳಲ್ಲಿ ಗಿಡಗಳನ್ನು ಕಡಿದು ನಾಶ ಮಾಡುವುದನ್ನು ತಡೆಯಬೇಕು. ಹಸಿರೀಕರಣಕ್ಕೆ ಆದ್ಯತೆ ನೀಡಬೇಕೆಂದು ಜನಪರ ಸಂಟನೆಗಳ ಒಕ್ಕೂಟ ಪದಾಧಿಕಾರಿಗಳು ಮನವಿ ಸಲ್ಲಿಸಿ ಆಗ್ರಹಿಸಿದರು. ಕೊಪ್ಪಳ ಸಂಪರ್ಕಿಸುವ ಇತರ ರಸ್ತೆಗಳಿಗೆ ವರ್ತುಲ ರಸ್ತೆ ನಿರ್ಮಿಸಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸಬೇಕು. ರಾಜ ಕಾಲುವೆ ಸ್ವಚ್ಛಗೊಳಿಸಿ ಜಂಗಲ್ ಕಟಿಂಗ್ ಮಾಡಿ. ಪ್ಲಾಸ್ಟಿಕ್ ನಿಷೇಧ, ರಸ್ತೆ ಅಗಲೀಕರಣ, ಅವೈಜ್ಞಾನಿ ಸ್ಪೀಡ್ ಬ್ರೇಕರ್ ತೆರವಿಗೆ ಒತ್ತಾಯಿಸಿದರು. ಪ್ರಮುಖರಾದ ಎಸ್.ಎ.ಗಫಾರ್, ಬಸವರಾಜ ಶೀಲವಂತರ, ತುಕಾರಾಮ್ ಪಾತ್ರೋಟಿ. ಚಾಂದಪಾಷಾ,ದೇವಪ್ಪ ಕಟ್ಟಿಮನಿ, ಶೇಖರ್ ದೊಡ್ಡಮನಿ ಇತರರಿದ್ದರು.