ಶಿವಮೊಗ್ಗ: ರಾಜ್ಯದಲ್ಲಿ ಬರಗಾಲ ತಲೆದೋರಿದ್ದು ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಬೇಕೆಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ 130 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಸಿದ್ಧತೆ ಮಾಡಿಕೊಂಡಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಎನ್‌ಡಿಆರ್‌ಎಫ್ ನೀತಿ ಬದಲಾಯಿಸಬೇಕು. ಉದ್ಯೋಗ ಖಾತ್ರಿ ಯೋಜನೆಗೆ ಒತ್ತು ಕೊಡಬೇಕು. ಅಂತರ್ಜಲ ವೃದ್ಧಿಗೆ ಯೋಜನೆ ರೂಪಿಸಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ, ಇಲ್ಲವೇ ನ್ಯಾಯಾಧೀಕರಣ ಸ್ಪಷ್ಟವಾದ ಮಾನದಂಡ ರೂಪಿಸಿಲ್ಲ. ಮಳೆ ಕಡಿಮೆಯಾದ ಸಂದರ್ಭ ಇದರಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಪರಿಹಾರ ಸೂತ್ರವೊಂದನ್ನು ರೂಪಿಸಬೇಕು. ಆ ಮೂಲಕ ಕರ್ನಾಟಕದ ಹಿತ ಕಾಯಬೇಕೆಂದು ಆಗ್ರಹಿಸಿದರು.
ಕಬ್ಬು ಬೆಲೆ ನಿಗದಿಗೆ ಕೇಂದ್ರ ಸರ್ಕಾರ ಶೇ.10.25 ಇಳುವರಿಯನ್ನು ಆಧಾರವಾಗಿಟ್ಟುಕೊಂಡಿದೆ. ಇದನ್ನು ಮಾರ್ಪಾಡು ಮಾಡಿ ಶೇ.8.5ಕ್ಕೆ ಇಳಿಸಬೇಕು. ತೆಂಗು ಬೆಳೆಗಾರರ ನೆರವಿಗೆ ಬರಬೇಕು. ಕೊಬ್ಬರಿ ಕ್ವಿಂಟಾಲ್‌ಗೆ ಬೆಂಬಲ ಬೆಲೆಯನ್ನು 20 ಸಾವಿರ ರೂ.ಗೆ ಏರಿಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.
ರೈತ ಮುಖಂಡರಾದ ಎನ್.ಡಿ.ವಸಂತಕುಮಾರ್, ಶಿವಾನಂದ ಕುಗ್ವೆ, ಕಣ್ಣಪ್ಪ, ರಮೇಶ್ ಐಗಿನಬೈಲು, ಎನ್.ಪ್ರೇಮಾ, ಜಯಲಕ್ಷ್ಮೀ, ಲತಾ, ನಂದಿನಿ, ಯು.ಬಿ. ಜೋಸೆಫ್, ಎಂ.ಬಿ.ಮಂಜಪ್ಪ ಮುಂತಾದವರು ಪ್ರತಿಭಟನೆಯಲ್ಲಿದ್ದರು.