ಶಿವಮೊಗ್ಗದಲ್ಲಿ ಜಿಲ್ಲಾ ಕಸಪಾದಿಂದ ಏರ್ಪಡಿಸಿದ್ದ ಬಸವೇಶ್ವರ ಜಯಂತಿಯನ್ನು ಡಿ.ಮಂಜುನಾಥ್ ಉದ್ಘಾಟಿಸಿದರು. ಡಾ.ಭಾರತಿದೇವಿ, ಮಹಾದೇವಿ, ಸೌಮ್ಯಾ ಶ್ರೀನಿವಾಸ್ ಇತರರಿದ್ದರು. 
ನ್ಯೂಸ್

ದಾರ್ಶನಿಕರ ವಿಚಾರಗಳಿಗೆ ಮಹತ್ವ ನೀಡಿ

ಶಿವಮೊಗ್ಗ: ಯಾವುದೇ ದಾರ್ಶನಿಕರ ಜನ್ಮದಿನಾಚರಣೆ ಸಂದರ್ಭ ಭಾವಚಿತ್ರಕ್ಕೆ ಮಾತ್ರ ಪೂಜೆ ಮಾಡಿ, ಅವರ ವಿಚಾರಗಳಿಗೆ ತಿಲಾಂಜಲಿ ಇಡುತ್ತಿರುವ ಕಾಲಮಾನದಲ್ಲಿ, ಪ್ರಜ್ಞಾವಂತ ಯುವ ಸಮೂಹ ದಾರ್ಶನಿಕರ ವಿಚಾರಗಳಿಗೆ ಹೆಚ್ಚು ಮಹತ್ವ ನೀಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ವಿದ್ಯಾನಗರದ ಶ್ರೇಯಾ ವಿದ್ಯಾರ್ಥಿನಿ ನಿಲಯದ ಆವರಣದಲ್ಲಿ ಏರ್ಪಡಿಸಿದ್ದ ಬಸವೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ 12ನೇ ಶತಮಾನದಲ್ಲಿದ್ದ ಕಲುಷಿತ ವಾತಾವರಣ, ಅಸಮಾನತೆಯ ಹೇಯ ಕೃತ್ಯಗಳನ್ನು ಹೋಗಲಾಡಿಸಲು, ಸಮ ಸಮಾಜದ ಪರಿಕಲ್ಪನೆಯಡಿ ವಚನ ಚಳವಳಿಯ ಮೂಲಕ ಬೆಳಕಾದರು ಎಂದು ತಿಳಿಸಿದರು.

ಹೊಳೆಹೊನ್ನೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಭಾರತಿದೇವಿ ಮಾತನಾಡಿ, ನಮ್ಮ ವರ್ತಮಾನದ ಬಿಕ್ಕಟ್ಟುಗಳಿಗೆ ಪರಿಹಾರ ಸಿಗದಿದ್ದಾಗ ನಮ್ಮ ಸಾಂಸ್ಕೃತಿಕ ನಾಯಕರ ವಿಚಾರಗಳಿಗೆ ಮುಖಾಮುಖಿಯಾಗಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಬಸವಣ್ಣನವರು ನಮ್ಮ ನಾಡಿನ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

ಶಿವಮೊಗ್ಗ ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಗಾಯಕಿ ನಳಿನಾಕ್ಷಿ, ಅನುಷಾ ವಚನಗಳನ್ನು ಹಾಡಿದರು. ಶ್ರೇಯಾ ವಿದ್ಯಾರ್ಥಿನಿ ನಿಲಯದ ಸಂಸ್ಥಾಪಕಿ ಸೌಮ್ಯಾ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.